ಒಮ್ಮೆ ವ್ಯಕ್ತಿಯೊಬ್ಬ ಮನೆ ಕಿಟಕಿ ಬಳಿ ಕುಳಿತು ಟೈಮ್ ಪಾಸ್ ಮಾಡ್ತಾ ಇದ್ದ. ಆಗ ಚಿಟ್ಟೆಯೊಂದು ತನ್ನ ಕಕೂನ್‌ನಿಂದ ಹೊರಬರೋದನ್ನು ನೋಡುತ್ತಾ ಇದ್ದ. ನೇಚರ್ ಎಷ್ಟೊಂದು ವಿಭಿನ್ನ ಅಲ್ವಾ? ನೋಡೋಣ ಚಿಟ್ಟೆ ಹೇಗೆ ಪ್ರಪಂಚಕ್ಕೆ ಕಾಲಿಡುತ್ತದೆ ಎಂದು ಕಾದು ಕುಳಿತ.
ಅದನ್ನೇ ವೀಕ್ಷಿಸುತ್ತಾ, You can do it come on ಎಂದು ಹೇಳುತ್ತಿದ್ದ. ಸಣ್ಣ ತೂತದಿಂದ ಹೊರಬರೋದಕ್ಕೆ ಚಿಟ್ಟೆ ಸಿಕ್ಕಾಪಟ್ಟೆ ಒದ್ದಾಡುತ್ತಿತ್ತು. ಈ ವ್ಯಕ್ತಿ ಒಳ್ಳೆ ಜನ ಚಿಟ್ಟೆ ಕಷ್ಟ ಕೂಡ ಇವನಿಗೆ ನೋಡೋಕೆ ಆಗಲಿಲ್ಲ. ನಾನು ಹೇಗಾದ್ರು ಮಾಡಿ ಸಹಾಯ ಮಾಡ್ಬೇಕು ಅಂತ ನಿರ್ಧಾರ ಮಾಡಿದ.
ಅಡುಗೆ ಮನೆಗೆ ಹೋಗಿ ಸೀದ ಕತ್ತರಿ ತೆಗೆದುಕೊಂಡು ಬಂದು, ಅದರ ಕಕೂನ್ ಕತ್ತರಿಸಿದ. ಚಿಟ್ಟೆ ಸುಲಭವಾಗಿ ರಪ್ ಅಂತ ಹೊರಗೆ ಬಂದುಬಿಡ್ತು. ನಾನು ಒಂದು ಜೀವಿಗೆ ಸಹಾಯ ಮಾಡಿದೆ ಅಂತ ವ್ಯಕ್ತಿಗೆ ಖುಷಿಯೋ ಖುಷಿ. ಹೊರಗೆ ಬಂದಿದ್ದಾಯ್ತಲಾ, ಇನ್ನು ಚಿಟ್ಟೆ ಹಾರಬೇಕು, ಅದರ ರೆಕ್ಕೆ ಬಣ್ಣಗಳನ್ನು ನೋಡ್ಬೇಕು ಎಂದು ಕಾದು ಕುಳಿತ.
ಎಷ್ಟು ಸಮಯವಾದ್ರೂ ಚಿಟ್ಟೆಗೆ ಹಾರಲು ಆಗಲೇ ಇಲ್ಲ. ಯಾಕೆ ಗೊತ್ತಾ? ಕತ್ತರಿಯಿಂದ ಅದರ ಕಕೂನ್ ಕತ್ತರಿಸುವ ವೇಳೆ ಚಿಟ್ಟೆಯ ರೆಕ್ಕೆಗೂ ಈತ ಹಾನಿ ಮಾಡಿದ್ದ. ಇದೀಗ ಚಿಟ್ಟೆ ಜೀವನವಿಡೀ ಹಾರದೇ ಬದುಕಬೇಕಿತ್ತು ಅಥವಾ ಬದುಕಲು ಆಗದೇ ಸಾಯಬೇಕು ಅಷ್ಟೆ!
ಹೌದು, ನೀವು ಒಳ್ಳೆಯವರೇ, ನಿಮ್ಮ ಉದ್ದೇಶ ಒಳ್ಳೆಯದೇ, ದೇವರು, ಚಿಟ್ಟೆ ಕಕೂನ್‌ನಿಂದ ಕಷ್ಟಪಟ್ಟು ಹೊರಗೆ ಬರಲಿ ಅನ್ನೋದ್ಯಾಕೆ? ತನ್ನ ಬಲದಿಂದ ಹೊರಬಂದ ಚಿಟ್ಟೆ ಕೆಲವೇ ಸಮಯದಲ್ಲಿ ಸುಲಭವಾಗಿ ಹಾರಾಟ ಮಾಡುತ್ತದೆ. ಆದರೆ ಮನುಷ್ಯ ಮಧ್ಯ ಬಂದ ಕಾರಣ ಚಿಟ್ಟೆ ಜೀವನ ಹಾಳಾಯ್ತು. ನೀವೂ ಹಾಗೇ ಇನ್ನೊಬ್ಬರಿಗೆ ಒಳ್ಳೆಯದು ಮಾಡೋಕೆ ಹೋಗಿ ಅಥವಾ ನೀವು ಒಳ್ಳೆಯವರು ಎಂದು ಅಂದುಕೊಳ್ಳಲು ಹೋಗಿ ಇನ್ನೊಬ್ಬರ ಜೀವನಕ್ಕೆ ಹಾನಿ ಮಾಡಬೇಡಿ. ಸಹಾಯ ಕೇಳಿದಾಗ ಮಾಡಿದ್ರೆ ಅಷ್ಟೇ ಸಾಕು!