ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಗತ್ತಿನ ಹಲವು ರಾಷ್ಟ್ರಗಳು ಯುದ್ಧದ ಮನಸ್ಥಿತಿಗೆ ವಾಲುತ್ತಿರುವ ಈ ಕ್ಷಣ ಭಾರತದ ತೀರ್ಥಂಕರರ ಬೋಧನೆಗಳು ಮತ್ತು ಅಹಿಂಸೆಯ ತತ್ವವು ಹೆಚ್ಚು ಪ್ರಸ್ತುತವಾಗುತ್ತಿದೆ’ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
ಭಾನುವಾರ ದೆಹಲಿಯ ಭಗವಾನ್ ಮಹಾವೀರರ 2,550ನೇ ನಿರ್ವಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರತ್ಯೇಕತಾ ಭಾವನೆಯು ಬೇರೂರುತ್ತಿರುವ ಪ್ರಸ್ತುತ ಸಂದರ್ಭ ಭಾರತವು ವಿಶ್ವಬಂಧುವಿನ ಸ್ಥಾನದಲ್ಲಿದೆ’ ಎಂದು ಹೇಳಿದರು.
ಇಂದು ಜಗತ್ತು ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಸತ್ಯ ಮತ್ತು ಅಹಿಂಸೆಯ ತತ್ವಗಳೇ ಪರಿಹಾರ ಭಾರತವು ಈಗ ಜಾಗತಿಕ ವೇದಿಕೆಯಲ್ಲಿ ಬಿಂಬಿಸುತ್ತಿದೆ. ಭಾರತಕ್ಕಿರುವ ಸಾಂಸ್ಕೃತಿಕ ವರ್ಚಸ್ಸು ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಅವರು ನಿರ್ವಾಣ ಮಹೋತ್ಸವದ ನಿಮಿತ್ತ ತರಲಾದ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿದರು.
2014ರಲ್ಲಿ ನಾವು ಅಧಿಕಾರಕ್ಕೆ ಬಂದಾಗ ದೇಶವು ಹತಾಶ ಭಾವನೆಯಲ್ಲಿ ಮುಳುಗಿತ್ತು. ಇಂದು ನಾವು ದೇಶದಲ್ಲಿ ಸಂಸ್ಕೃತಿ, ಪರಂಪರೆಗೆ ಹೆಚ್ಚು ಉತ್ತೇಜನ ನೀಡುತ್ತಿದ್ದೇವೆ. ಯೋಗ ಮತ್ತು ಆಯುರ್ವೇದ ಚಿಕಿತ್ಸೆಗೆ ಪ್ರೋತ್ಸಾಹ ನೀಡಲಾಗುತ್ತಿದೆ’ ಎಂದು ಹೇಳಿದರು.