ಬರದಿಂದ ಕಂಗಾಲಾದ ರೈತರ ಕಷ್ಟ ಆಲಿಸಿದ ಬಿಜೆಪಿ ಬರ ಅಧ್ಯಯನ ತಂಡ

ಹೊಸದಿಗಂತ ವರದಿ,ಚಿತ್ರದುರ್ಗ

ರಾಜ್ಯದಲ್ಲಿ ಆವರಿಸಿರುವ ಭೀಕರ ಬರದಿಂದ ರೈತರು ಕಂಗಾಲಾಗಿದ್ದು, ಅವರ ಸಮಸ್ಯೆಗಳನ್ನು ಆಲಿಸಿ ರಾಜ್ಯ ಸರ್ಕಾರದಿಂದ ಪರಿಹಾರ ಕೊಡಿಸಲು ಭಾರತೀಯ ಜನತಾ ಪಕ್ಷ ಕೈಗೊಂಡಿರುವ ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದ ಬರ ಅಧ್ಯಯನ ತಂಡ ಮಂಗಳವಾರ ಚಿತ್ರದುರ್ಗ ಜಿಲ್ಲೆಯಲ್ಲಿ ಅಧ್ಯಯನ ನಡೆಸಿತು.

ಭರಮಸಾಗರ ಹೋಬಳಿಯ ಕೊಳಾಳ್ ಗ್ರಾಮದ ಹೊಲಗಳಿಗೆ ಭೇಟಿ ನೀಡಿದ ತಂಡ ರೈತರ ಜೊತೆ ಮಾತುಕತೆ ನಡೆಸಿತು. ಸಾವಿರಾರು ರೂ.ಗಳಗಳನ್ನು ಖರ್ಚು ಮಾಡಿ ಹುಳಮೆ ಮಾಡಲಾಗಿದೆ. ಆದರೆ ಈ ಬಾರಿ ಮಳೆ ಬಾರದ ಕಾರಣ ಬೆಳೆ ನಷ್ಟ ಆಗಿದೆ. ಸಾಲ ಮಾಡಿ ಹುಳಮೆ ಮಾಡಲಾಗಿದೆ. ಹಾಕಿದ ಬಂಡವಾಳವನ್ನೂ ಕಾಣದಂತಾಗಿದೆ. ವ್ಯವಸಾಯಕ್ಕೆ ಮಾಡಿದ ಖರ್ಚು ಇಲ್ಲ, ಇತ್ತ ಬೆಳೆಯೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಗೋಳು ಕೇಳುವವರಿಲ್ಲದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡರು.

ಬಳಿಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ರಾಜ್ಯವು ಎಂದೂ ಕಾಣದಂತಹ ಭೀಕರ ಬರ ಪರಿಸ್ಥಿತಿ ಎದುರಾಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಕಚ್ವಾಟ ನಡೆಸುತ್ತಿದ್ದಾರೆ. ಅವರ ಸಚಿವ ಸಂಪುಟದ ಸದಸ್ಯರು ಅಧಿಕಾರ ಹಂಚಿಕೆ ಕುರಿತು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರವನ್ನು ಎಚ್ಚರಿಸಿ ರೈತರ ಸಮಸ್ಯೆಗಳನ್ನು ಈಡೇರಿಸಲು ಭಾರತೀಯ ಜನತಾ ಪಕ್ಷದ ಮುಖಂಡರು ೧೭ ತಂಡಗಳನ್ನು ಮಾಡಿಕೊಂಡು ರಾಜ್ಯ ಪ್ರವಾಸ ಮಾಡುತ್ತಿದ್ದೇವೆ ಎಂದರು.

ಶೇಕಡಾ ೩೦ರಷ್ಟು ಮಾತ್ರ ಮಳೆ ಆಗಿದ್ದು, ಸಂಪೂರ್ಣ ರಾಜ್ಯದಲ್ಲೇ ಬರದ ಛಾಯೆ ಆವರಿಸಿದೆ. ರೈತರಿಗೆ ಆಗಿರುವ ನಷ್ಟ. ಜನ, ಜಾನುವಾರುಗಳ ಸ್ಥಿತಿಗತಿ ಭೀಕರವಾಗಿದೆ. ಆದರೂ ಕೂಡ ಕಾಂಗ್ರೇಸ್ ನೇತೃತ್ವದ ರಾಜ್ಯ ಸರ್ಕಾರ ರೈತರನ್ನು ಅತ್ಯಂತ ನಿರ್ಲಕ್ಷ ಧೋರಣೆಯಿಂದ ನೋಡುತ್ತಿದೆ. ಇದರ ವಿರುದ್ದವಾಗಿ ಬಿಜೆಪಿ ಜನಪರ ಧ್ವನಿ ಎತ್ತಬೇಕೆಂದು ಬರ ಅಧ್ಯಯನ ಪ್ರವಾಸ ಮಾಡುತ್ತಿದೆ. ಆ ಮೂಲಕ ರಾಜ್ಯ ಸರ್ಕಾರದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಇದರಿಂದ ಸಿದ್ದರಾಮಯ್ಯ ಈಗ ಎಚ್ಚೆತ್ತುಕೊಂಡು, ಸಚಿವರಿಗೆ ಪ್ರವಾಸ ಮಾಡಲು ಹೇಳಿದ್ದಾರೆ. ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ರೈತರಿಗೆ ವಿದ್ಯುತ್ ಕೊರತೆ ಇದ್ದಾಗ್ಯೂ ಕೇವಲ ೩-೪ ಗಂಟೆಗಳ ಕಾಲ ವಿದ್ಯುತ್ ನೀಡಲಾಗುತ್ತಿತ್ತು. ಈಗ ೭ ಗಂಟೆ ವಿದ್ಯುತ್ ನೀಡುವುದಾಗಿ ಹೇಳಿರುವ ಮುಖ್ಯಮಂತ್ರಿಗಳು ಜನರ, ರೈತರ ಹಾಗೂ ಜಾನುವಾರುಗಳ ಸ್ಥಿತಿಗತಿ ಅರಿತು ಕೆಲಸ ಮಾಡಬೇಕೆಂದು ಆಗ್ರಹಿಸಿದರು.
ಇದಾದ ಬಳಿಕ ನಾಯಕನಹಟ್ಟಿ ಸುತ್ತಮುತ್ತಲಿನ ಜಮೀನುಗಳಲ್ಲಿ ಬರ ಅಧ್ಯಯನ ತಂಡ ಸಂಚರಿಸಿತು. ಅಲ್ಲಿಂದ ಚಳ್ಳಕೆರೆ ಸುತ್ತಮುತ್ತಲಿನ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು. ಚಳ್ಳಕೆರೆಯಲ್ಲಿರುವ ಸಣ್ಣ ಕೈಗಾರಿಕೆಗಳ ಉದ್ಯಮಿಗಳ ಜೊತೆ ಮಾತುಕತೆ ನಡೆಸಲಾಯಿತು. ತೀವ್ರ ಬರದಿಂದಾಗಿ ರೈತರಿಗೆ ಆಗಿರುವ ಬೆಳೆನಷ್ಟ, ವಿದ್ಯುತ್ ಕೊರತೆಯಿಂದ ಕೈಗಾರಿಕೋದ್ಯಮಿಗಳ ಉಂಟಾಗಿರುವ ತೊಂದೆ ಕುರಿತು ಚರ್ಚೆ ನಡೆಸಲಾಯಿತು.

ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಂ.ಚಂದ್ರಪ್ಪ, ಕೆ.ಎಸ್.ನವೀನ್, ಮಾಜಿ ಶಾಸಕ ಜಿ.ಹೆಚ.ತಿಪ್ಪಾರೆಡ್ಡಿ, ಹರಿಹರ ಶಾಸಕ ಬಿ.ಪಿ.ಹರೀಶ್, ಜಗಳೂರು ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ ಬರ ಅಧ್ಯಯನ ತಂಡದಲ್ಲಿ ಭಾಗವಹಿಸಿದ್ದರು. ಭರಮಸಾಗರ ಹೋಬಳಿಯ ಕೊಳಾಳ್ ಗ್ರಾಮದ ಚೌಡೇಶ್ವರಿ ದೇವಸ್ಥಾನದ ಸುತ್ತಮತ್ತಲಿನ ಸುಮಾರು ೮ ಸಾವಿರ ಎಕರೆ ಮೆಕ್ಕೆಜೋಳ ಬೆಳೆ ನಷ್ಟವಾಗಿದ್ದು, ಗ್ರಾಮದ ವಿವಿಧ ರೈತರುಗಳ ಜಮೀನಿಗೆ ತೆರಳಿ ಅಲ್ಲಿನ ಮೆಕ್ಕೆಜೋಳ ಬೆಳೆ ವಿಕ್ಷಣೆ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!