ಹೊಸದಿಗಂತ ವರದಿ,ಅಂಕೋಲಾ:
ಪಾರ್ಶ್ವವಾಯು ಪೀಡಿತರಾಗಿ ತಾಲೂಕಿನ ಬೆಳಂಬಾರದಲ್ಲಿ ಪಾರಂಪರಿಕ ನಾಟಿ ವೈದ್ಯ ಹನುಮಂತ ಗೌಡ ವನಸ್ಪತಿಯ ಔಷಧಿ ಚಿಕಿತ್ಸೆ ಪಡೆಯುತ್ತಿದ್ದ ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದು ತುಳಸಜ್ಜಿ ಅವರ ಆಶಯದಂತೆ ಅವರನ್ನು ಅವರ ಮನೆಗೆ ಕಳುಹಿಸಲಾಯಿತು.
ತುಳಸಜ್ಜಿ ಮನೆಗೆ ತೆರಳುತ್ತಿರುವ ಸಂದರ್ಭದಲ್ಲಿ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಬೆಳಂಬಾರದ ಶಿವು ಬೊಮ್ಮು ಗೌಡ ಸ್ಮಾರಕ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿ ತುಳಸಜ್ಜಿ ಆರೋಗ್ಯ ವಿಚಾರಿಸಿ ಅವರಿಗೆ ಮತ್ತು ಚಿಕಿತ್ಸೆ ನೀಡಿದ ವೈದ್ಯ ಹನುಮಂತ ಗೌಡ ಅವರಿಗೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಾಲಕ್ಕಿ ಸಮಾಜದ ಹಿರಿಯ ಬಿ.ಎಸ್. ಗೌಡ ಮಾತನಾಡಿ ಮಹಾತ್ಮಾ ಗಾಂಧೀಜಿಯವರಿಗೆ ಚಿಕಿತ್ಸೆ ನೀಡಿರುವ ಬೆಳಂಬಾರದ ಹಾಲಕ್ಕಿ ಗೌಡರ ಕುಟುಂಬ ಪದ್ಮಶ್ರೀ ತುಳಸಿ ಗೌಡ ಅವರಿಗೆ ಹೊಸ ಚೈತನ್ಯ ನೀಡುವ ಕೆಲಸ ಮಾಡಿದ್ದು ಹಾಲಕ್ಕಿ ಸಮಾಜದ ನಾಟಿ ವೈದ್ಯಕೀಯ ಪರಂಪರೆಯ ಶ್ರೇಷ್ಠತೆ ಉಳಿಸುವಲ್ಲಿ ವೈದ್ಯ ಹನುಮಂತ ಗೌಡ ಅವರ ಕೊಡುಗೆ ಅಪಾರ ಎಂದರು.
ಯುವ ಮುಖಂಡ ಪುರುಷೋತ್ತಮ ಗೌಡ ಮಾತನಾಡಿ ಪದ್ಮಶ್ರೀ ಸುಕ್ರಿ ಗೌಡ ಮತ್ತು ತುಳಸಿ ಗೌಡ ಹಾಲಕ್ಕಿ ಸಮಾಜದ ಆಸ್ತಿಯಾಗಿದ್ದು ಅವರನ್ನು ಉಳಿಸಿಕೊಳ್ಳಬೇಕಾಗಿದೆ ವೈದ್ಯ ಹನುಮಂತ ಗೌಡ ಅವರಿಗೆ ಉತ್ತಮ ಚಿಕಿತ್ಸೆ ನೀಡಿದ್ದಾರೆ ಎಂದರು.
ವೈದ್ಯ ಹನುಮಂತ ಗೌಡ ಮಾತನಾಡಿ ಸಮಾಜದ ಹಿರಿಯ ಚೇತನರನ್ನು ಉಳಿಸುವುದು ನಮ್ಮ ಕರ್ತವ್ಯ ತುಳಸಜ್ಜಿ ಕುಟುಂಬ ಅವರನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದು ಅವರು ಬೇಗನೆ ಸಂಪೂರ್ಣ ಗುಣಮುಖರಾಗಲಿದ್ದಾರೆ ಎಂದರು.
ಹಾಲಕ್ಕಿ ಸಮಾಜದ ಪ್ರಮುಖರುಗಳಾದ ಎಸ್. ಟಿ.ಗೌಡ, ಮಂಕಾಳು ಗೌಡ, ಮಾದೇವ ಗೌಡ, ಶಂಕರ ಗೌಡ, ಪರಮೇಶ್ವರ ಗೌಡ ಉಪಸ್ಥಿತರಿದ್ದರು.