ಹೊಸದಿಗಂತ ವಿಜಯನಗರ:
ಹೊಸಪೇಟೆ ಸಮೀಪದ ತುಂಗದ್ರಾ ಜಲಾಶಯದ ಕ್ರಸ್ಟ್ ಗೇಟ್ ಚೈನ್ ಲಿಂಕ್ ತುಂಡಾ, ಗೇಟ್ ಕೊಚ್ಚಿ ಹೋಗಿದ್ದರಿಂದ ಕಾರ್ಯಪ್ರವೃತ್ತರಾಗಿರುವ ಅಧಿಕಾರಿಗಳು ರಾತ್ರೋರಾತ್ರಿ ಗೇಟ್‌ನ ನೀಲನಕ್ಷೆ ಸಿದ್ಧಗೊಳಿಸಿದ್ದಾರೆ. ಅಲ್ಲದೇ, ಎರಡ್ಮೂರು ದಿನಗಳಲ್ಲಿ ಗೇಟ್ ತಯಾರಿಸಲು ಸ್ಥಳೀಯ ಸ್ಟೀಲ್ ಕಂಪನಿಗೆ ನಿರ್ದೇಶಿಸಿದ್ದಾರೆ.
ಕ್ರಸ್ಟ್ ಗೇಟ್ ಮುರಿದು ಬಿದಿದ್ದರಿಂದ ಟಿಬಿ ಡ್ಯಾಂನ ವೈಕುಂಠ ಗೆಸ್ಟ್ ಹೌಸ್ ನಲ್ಲಿ ಭಾನುವಾರ ಬೆಳಗಿನಜಾವ ತುಂಗಭದ್ರ ಮಂಡಳಿ ಕಾರ್ಯದರ್ಶಿ ಓ.ಆರ್.ಕೆ.ರೆಡ್ಡಿ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ ಹಿರಿಯ ಇಂಜಿನಿಯರ್‌ಗಳ ತಂಡ ಸುದೀರ್ಘ ಚರ್ಚೆ ನಡೆಸಿ, ಗ್ರಸ್ಟ್ ಗೇಟ್ ನಿರ್ಮಾಣಕ್ಕೆ ನೀಲ ನಕ್ಷೆ ಸಿದ್ಧಗೊಳಿಸಿದ್ದಾರೆ. ಬೆಳಗ್ಗೆ 5 ಗಂಟೆ ವೇಳೆಗೆ ಸಭೆ ಮುಕ್ತಾಯಗೊಂಡ ಬಳಿಕ ಸ್ಥಳೀಯ ಟಿಎಸ್‌ಪಿಗೆ ಸ್ಟೀಲ್ ವೆಲ್ಡಿಂಗ್ ಸೇವೆ ಒದಗಿಸುತ್ತಿದ್ದ ಕಂಪನಿಗೆ ಕ್ರಸ್ಟ್ ಗೇಟ್ ನಿರ್ಮಿಸುವಂತೆ ಸೂಚಿಸಿದ್ದಾರೆ.
ಹಳೇಯ ಕ್ರಸ್ಟ್ ಗೇಟ್ ಮಾದರಿಯಲ್ಲೇ 12*20 ಅಡಿ ಅಳತೆಯ ಪ್ರತ್ಯೇಕ 5 ಹಲಗೆಗಳನ್ನು ನಿರ್ಮಿಸಿ, ಬಳಿಕ ಅದನ್ನು 60 ಅಡಿ ಉದ್ದಕ್ಕೆ ಜೋಡಿಸಿಕೊಂಡು ಗೇಟ್ ಅಳವಡಿಸಬೇಕಿದೆ. ಗೇಟ್ ಸುಮಾರು 48 ಟನ್ ನಷ್ಟು ಭಾರವಿರುತ್ತದೆ. ಅದಕ್ಕಾಗಿ ಜಲಾಶಯದಲ್ಲಿ ಸದ್ಯ ಇರುವ 102 ಅಡಿ ನೀರಿನ ಮಟ್ಟವನ್ನು 20 ಅಡಿಯಷ್ಟು ಕಡಿಮೆಯಾಗಬೇಕು. ಅದಕ್ಕಾಗಿ ಎಲ್ಲ ಬಾಗಿಲುಗಳ ಮೂಲಕ ನದಿಗೆ ನೀರು ಹರಿಸಲಾಗುತ್ತಿದೆ ಎಂದು ಟಿಬಿ ಬೋರ್ಡ್ನ ಕಾರ್ಯದರ್ಶಿ ಓ.ಆರ್.ಕೆ.ರೆಡ್ಡಿ ಹೊಸದಿಗಂತ ಪತ್ರಿಕೆಗೆ ಮಾಹಿತಿ ನೀಡಿದರು.