ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಜರ್ಬೈಜಾನ್‌ನಿಂದ ಟರ್ಕಿಗೆ ವಾಪಸಾಗುತ್ತಿದ್ದ ಟರ್ಕಿ ಸೇನೆಯ C-130 ಸಾರಿಗೆ ವಿಮಾನ ಜಾರ್ಜಿಯಾದಲ್ಲಿ ಅಪಘಾತಕ್ಕೀಡಾಗಿದೆ. ಈ ದುರಂತದಲ್ಲಿ ವಿಮಾನದಲ್ಲಿದ್ದ 20 ಮಂದಿ ಸಿಬ್ಬಂದಿ ಮತ್ತು ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ಮಂಗಳವಾರ ತಿಳಿಸಿದೆ.
ವಿಮಾನವು ಅಜೆರ್ಬೈಜಾನ್‌ನ ಗಂಜಾ ವಿಮಾನ ನಿಲ್ದಾಣದಿಂದ ಹೊರಟು ಟರ್ಕಿಗೆ ತೆರಳುತ್ತಿತ್ತು. ಜಾರ್ಜಿಯಾದ ಗಡಿಯ ಸಮೀಪದಲ್ಲಿ ಅ ವಿಮಾನವು ನಿಯಂತ್ರಣ ಕಳೆದುಕೊಂಡು ಪತನವಾಗಿದೆ ಎಂದು ಹೇಳಲಾಗಿದೆ.
ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರು, ಜಾರ್ಜಿಯಾ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ಕೈಗೊಳ್ಳಬೇಕಾದ ಪರಿಹಾರ ಕಾರ್ಯಗಳ ಬಗ್ಗೆ ಚರ್ಚಿಸಿದರು. ಅತ್ತ ಅಜೆರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರು ಟರ್ಕಿ ಅಧ್ಯಕ್ಷರಿಗೆ ಸಂತಾಪ ಸೂಚಿಸಿದ್ದಾರೆ.
ಟರ್ಕಿ ವಿದೇಶಾಂಗ ಸಚಿವ ಹಕನ್ ಫಿಡಾನ್ ಅವರು ಜಾರ್ಜಿಯಾದ ತಮ್ಮ ಸಹೋದ್ಯೋಗಿ ಮಕಾ ಬೊಚೋರಿಶ್ವಿಲಿಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಚರ್ಚಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಜಾರ್ಜಿಯಾ-ಅಜೆರ್ಬೈಜಾನ್ ಗಡಿಯಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಸಿಘ್ನಾಘಿ ಪ್ರಾಂತ್ಯದಲ್ಲಿಯೇ ಆ ವಿಮಾನ ಪತವಾಗಿರುವುದಾಗಿ ರಕ್ಷಣಾ ಇಲಾಖೆ ತಿಳಿಸಿದೆ. ಜಾರ್ಜಿಯಾದ ವಾಯು ಸಂಚಾರ ನಿಯಂತ್ರಣ ಸೇವೆಗಳ ಪ್ರಕಾರ, ವಿಮಾನವು ಜಾರ್ಜಿಯಾ ವಾಯುಪ್ರದೇಶವನ್ನು ಪ್ರವೇಶಿಸಿದ ತಕ್ಷಣ ರಡಾರ್‌ನಿಂದ ಕಣ್ಮರೆಯಾಗಿದೆ. ತುರ್ತು ಸೇವೆಗಳಿಂದ ಅಪಘಾತದ ಬಗ್ಗೆ ಮಾಹಿತಿ ಪಡೆದ ನಂತರ ಅವರು ಕಾರ್ಯಾಚರಣೆಗಳನ್ನು ಪ್ರಾರಂಭಿಸಿದ್ದಾರೆ.
ಟರ್ಕಿ C-130 ವಿಮಾನವು ಜಾರ್ಜಿಯಾ ವಾಯುಪ್ರದೇಶವನ್ನು ಪ್ರವೇಶಿಸಿದ ಕೆಲವೇ ನಿಮಿಷಗಳಲ್ಲಿ, ಕಂಟ್ರೋಲ್ ರೂಂನೊಂದಿಗೆ ಎಲ್ಲಾ ರೀತಿಯ ಸಂವಹನಗಳನ್ನು ಕಡಿತಗೊಂಡವು. ಕನಿಷ್ಟಪಕ್ಷ ಅದರಲ್ಲಿನ ಪೈಲಟ್ ಗಳಿಗೆ ತುರ್ತು ಸಂದೇಶಗಳನ್ನು ಕಳುಹಿಸುವುದಕ್ಕೂ ಸಮಯ ಸಿಕ್ಕಿಲ್ಲ ಎಂದೆನಿಸುತ್ತದೆ. ಅಷ್ಟು ಬೇಗ ಆ ವಿಮಾನ ಪತನವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

