ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿವಿ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣದ ಅಂತಿಮ ತೀರ್ಪನ್ನು ಇಂದು ದೆಹಲಿಯ ಸಾಕೇತ್ ಕೋರ್ಟ್ ಪ್ರಕಟಿಸಿದ್ದು, ಐವರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದೆ.
ತೀರ್ಪಿನ ವೇಳೆ ಕೋರ್ಟ್, ಸೌಮ್ಯಾ ಅವರನ್ನು ದರೋಡೆ ಮಾಡುವ ಉದ್ದೇಶದಿಂದ ಕೊಲೆ ಮಾಡಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆರೋಪಿಗಳು ಶಿಕ್ಷೆಗೆ ಅರ್ಹರು ಎಂದು ತಿಳಿಸಿ, ಮಹಾರಾಷ್ಟ್ರದ ಕಠಿಣ ಕಾನೂನಾದ ಎಂಸಿಒಸಿಎ (ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ) ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ.
ಪ್ರಕರಣದ ಹಿನ್ನೆಲೆ
2008 ರಲ್ಲಿ ದೆಹಲಿಯಲ್ಲಿ ಟಿವಿ ಪತ್ರಕರ್ತೆಯಾಗಿದ್ದ ಸೌಮ್ಯಾ ವಿಶ್ವನಾಥನ್ ಅವರು ಕೆಲಸ ಮುಗಿಸಿಕೊಂಡು ಮನೆಗೆ ತೆರಳಿದ್ದರು. ಈ ವೇಳೆ ಹಿಂಬಾಲಿಸಿಕೊಂಡು ಬಂದಿದ್ದ ಐವರು ಆರೋಪಿಗಳು ಸೌಮ್ಯಾ ಅವರ ಮೇಲೆ ಗುಂಡಿನ ದಾಳಿ ನಡೆಸಿ ಬರ್ಬರವಾಗಿ ಕೊಲೆ ಮಾಡಿದ್ದರು. ಇದಾದ ಬಳಿಕ ಆರೋಪಿಗಳು ಕೃತ್ಯ ಬಯಲಾಗದಂತೆ ಮಾಡಲು ಅಪಘಾತವಾದಂತೆ ಸೃಷ್ಟಿಸಿದ್ದರು.
2008 ರ ಸೆಪ್ಟೆಂಬರ್ 30 ರಂದು ನಡೆದಿದ್ದ ಈ ಘಟನೆಯು ಆರಂಭದಲ್ಲಿ ಕಾರು ದುರಂತ ಎಂಬಂತೆ ಕಂಡುಬಂದಿತ್ತು. ವಿಧಿವಿಜ್ಞಾನ ವರದಿಗಳಲ್ಲಿ ಸೌಮ್ಯಾಳ ತಲೆಗೆ ಗುಂಡೇಟು ತಗುಲಿ ಸಾವನ್ನಪ್ಪಿದ್ದಾಳೆ ಎಂದು ಬಹಿರಂಗವಾಗಿತ್ತು. ಇದು ಕೊಲೆ ಎಂದು ತಿಳಿದ ಬಳಿಕ ಪೊಲೀಸರು ತನಿಖೆ ಪ್ರಾರಂಭಿಸಿದ್ದರು.
ಘಟನೆ ನಡೆದ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳಿಗಳನ್ನು ಪರಿಶೀಲಿಸಿದ ಬಳಿಕ, ಸೌಮ್ಯಾಳನ್ನು ಕಾರೊಂದು ಹಿಂಬಾಲಿಸಿದ್ದು ಗೊತ್ತಾಗಿತ್ತು. 2009 ರಲ್ಲಿ ದೆಹಲಿ ಪೊಲೀಸರು ಇಬ್ಬರು ಶಂಕಿತರಾದ ರವಿ ಕಪೂರ್ ಮತ್ತು ಅಮಿತ್ ಶುಕ್ಲಾರನ್ನು ಬಂಧಿಸಿದ್ದರು. ಅದಾದ ಬಳಿಕ ತನಿಖೆಯು ಮಹತ್ವದ ತಿರುವು ಪಡೆದುಕೊಂಡಿತ್ತು. ಈ ಇಬ್ಬರೂ ಇನ್ನೊಂದು ಕೊಲೆ ಕೇಸಲ್ಲಿ ಆಪಾದಿತರಾಗಿದ್ದರು.
ವಿಚಾರಣೆಯ ವೇಳೆ ಕಪೂರ್ ಮತ್ತು ಶುಕ್ಲಾ ಸೌಮ್ಯಾಳ ಹತ್ಯೆಯ ಜೊತೆಗೆ ಇನ್ನೊಂದು ಕೊಲೆಯಲ್ಲಿ ಭಾಗಿಯಾಗಿದ್ದಾಗಿ ಬಾಯ್ಬಿಟ್ಟಿದ್ದರು.ಇದಾದ ಬಳಿಕ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ 2010 ರಲ್ಲಿ ಇತರ ಮೂವರು ಶಂಕಿತರಾದ ಬಲ್ಜೀತ್ ಮಲಿಕ್, ಅಜಯ್ ಕುಮಾರ್ ಮತ್ತು ಅಜಯ್ ಸೇಥಿಯನ್ನು ಬಂಧಿಸಿ, ಐವರ ವಿರುದ್ಧ ಕೋರ್ಟ್ಗೆ ಆರೋಪಪಟ್ಟಿ ಸಲ್ಲಿಸಲಾಗಿತ್ತು. ನವೆಂಬರ್ 16, 2010 ರಂದು ಸಾಕೇತ್ ನ್ಯಾಯಾಲಯದಲ್ಲಿ ವಿಚಾರಣೆಯು ಪ್ರಾರಂಭವಾಗಿತ್ತು.
ವಿಚಾರಣೆಯ ವೇಳೆ ಹಂತಕರಲ್ಲಿದ್ದ ಬಂದೂಕು, ಸಿಸಿಟಿವಿ ದೃಶ್ಯಾವಳಿಗಳು, ಆರೋಪಿಗಳ ತಪ್ಪೊಪ್ಪಿಗೆ ಹೇಳಿಕೆ ಸೇರಿದಂತೆ ವಿಧಿವಿಜ್ಞಾನ ಸಾಕ್ಷಧಾರಗಳ ಮೇಲೆ ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿದ್ದಾಗಿ ತಿಳಿದು ಬಂದಿತ್ತು. ಸುದೀರ್ಘ ಕಾನೂನು ಹೋರಾಟದ ನಂತರ 2016ರ ಜುಲೈ 19 ರಂದು ಸಾಕೇತ್ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸಿ ತೀರ್ಪು ಕಾಯ್ದಿರಿಸಿತ್ತು.