May 4, 2026
Monday, May 4, 2026
spot_img

ಬಿಜೆಪಿಯಿಂದ ಟ್ವಿಟ್ಟರ್ ವಾರ್: ಕಾಂಗ್ರೆಸ್ ನಾಯಕನಿಗೆ ‘ಸೋಲಿನ ಸೆಂಚುರಿ’ ಹಣೆಪಟ್ಟಿ ಕಟ್ಟಿದ ಕೇಸರಿ ಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಎರಡು ದಶಕಗಳಿಂದ ಕಾಂಗ್ರೆಸ್ ರಾಜಕಾರಣದ ಸಾರಥ್ಯ ವಹಿಸಿರುವ ರಾಹುಲ್ ಗಾಂಧಿ ಅವರಿಗೆ ಇದೀಗ “ಸೋಲಿನ ಶತಕ”ದ ಭೀತಿ ಎದುರಾಗಿದೆ. 2026ರ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶಗಳು ಹೊರಬೀಳುತ್ತಿದ್ದಂತೆ, ಬಿಜೆಪಿ ಮತ್ತು ಸೋಷಿಯಲ್ ಮೀಡಿಯಾ ಬಳಕೆದಾರರು ರಾಹುಲ್ ಗಾಂಧಿ ಅವರ ರಾಜಕೀಯ ಹಾದಿಯ ಬಗ್ಗೆ ಹೊಸ ದಾಳಿ ಆರಂಭಿಸಿದ್ದಾರೆ.

ಬಿಜೆಪಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅಂಕಿ-ಅಂಶಗಳ ಪ್ರಕಾರ, ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಲೋಕಸಭೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ಸೇರಿದಂತೆ ಒಟ್ಟು 99 ಬಾರಿ ಸೋಲನ್ನು ಕಂಡಿದೆ. ಸದ್ಯದ ಫಲಿತಾಂಶಗಳ ಟ್ರೆಂಡ್ ಗಮನಿಸಿದರೆ ಈ ಸಂಖ್ಯೆ ಶೀಘ್ರವೇ 100 ಮುಟ್ಟಲಿದ್ದು, ಇದನ್ನು ಬಿಜೆಪಿಯು “ಸೋಲಿನ ಶತಕ” ಎಂದು ವ್ಯಂಗ್ಯವಾಡಿದೆ. ಪದೇ ಪದೇ ಹೊಸ ಬ್ರ್ಯಾಂಡಿಂಗ್ ಮತ್ತು ಯಾತ್ರೆಗಳ ಮೂಲಕ ಕಣಕ್ಕಿಳಿದರೂ ಮತದಾರರು ರಾಹುಲ್ ನಾಯಕತ್ವವನ್ನು ಒಪ್ಪುತ್ತಿಲ್ಲ ಎಂಬುದು ಬಿಜೆಪಿ ಆರೋಪ.

ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶವು ಕಾಂಗ್ರೆಸ್ ಪಾಳಯದಲ್ಲಿ ದೊಡ್ಡ ಮಟ್ಟದ ಬಿರುಗಾಳಿ ಎಬ್ಬಿಸಿದೆ. ಈ ಬಾರಿಯ ಸೋಲಿಗೆ ಪಕ್ಷದ ಹಿರಿಯ ನಾಯಕರ ಅತಿಯಾದ ಆತ್ಮವಿಶ್ವಾಸ ಮತ್ತು ತಪ್ಪು ನಿರ್ಧಾರಗಳೇ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.

ವರದಿಗಳ ಪ್ರಕಾರ, ತಮಿಳುನಾಡಿನ ಬದಲಾಗುತ್ತಿರುವ ರಾಜಕೀಯ ಗಾಳಿಯನ್ನು ಅರಿತಿದ್ದ ರಾಹುಲ್ ಗಾಂಧಿ, ನಟ ವಿಜಯ್ ಅವರ TVK ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಒಲವು ತೋರಿದ್ದರು. ಉದಯೋನ್ಮುಖ ಶಕ್ತಿಯಾಗಿರುವ ವಿಜಯ್ ಜೊತೆ ಕೈಜೋಡಿಸುವುದು ಒಳಿತು ಎಂದು ರಾಹುಲ್ ಸಲಹೆ ನೀಡಿದ್ದರು. ಆದರೆ, ಕಾಂಗ್ರೆಸ್‌ನ ಹಿರಿಯ ನಾಯಕರು ಈ ಪ್ರಸ್ತಾಪವನ್ನು ತಿರಸ್ಕರಿಸಿ ಹಳೆಯ ಮೈತ್ರಿಯನ್ನೇ ನೆಚ್ಚಿಕೊಂಡಿದ್ದು ಇಂದಿನ ದುಸ್ಥಿತಿಗೆ ಕಾರಣ ಎನ್ನಲಾಗುತ್ತಿದೆ.

ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ಸೇರಿದಂತೆ 2026ರ ಫಲಿತಾಂಶಗಳು ಕಾಂಗ್ರೆಸ್‌ಗೆ ಆಘಾತ ತಂದಿವೆ. ಒಂದೆಡೆ ರಾಹುಲ್ ಗಾಂಧಿ ಅವರ ಆಪ್ತ ವಲಯವು ಹಿರಿಯ ನಾಯಕರ ಮೇಲೆ ಗೂಬೆ ಕೂರಿಸುತ್ತಿದ್ದರೆ, ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ರಾಹುಲ್ ಅವರ ನಾಯಕತ್ವದ ಸಾಮರ್ಥ್ಯದ ಬಗ್ಗೆಯೇ ಪ್ರಶ್ನೆಗಳು ಏಳುತ್ತಿವೆ. ಸೋಲಿನ ಈ ಸರಪಳಿಯನ್ನು ಕಡಿದು ಹಾಕಲು ಕಾಂಗ್ರೆಸ್ ತನ್ನ ಆಂತರಿಕ ಕಾರ್ಯತಂತ್ರವನ್ನು ಹೇಗೆ ಬದಲಿಸಿಕೊಳ್ಳಲಿದೆ ಎಂಬುದು ಈಗ ಕುತೂಹಲದ ಸಂಗತಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !