June 16, 2026
Tuesday, June 16, 2026
spot_img

ಬೇರೆಯವರ ಮನೆಯ ಟ್ರಂಕ್‌ನಲ್ಲಿದ್ದ ಬಂಗಾರ ಕದ್ದು ಅಡವಿಟ್ಟಿದ್ದ ಇಬ್ಬರ ಬಂಧನ

ಹೊಸದಿಗಂತ ವರದಿ ಹೊನ್ನಾವರ:

ಮನೆಯೊಂದರ ಟ್ರಂಕಿನಲ್ಲಿ ಇಟ್ಟ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿ ಫೈನಾನ್ಸ್ ಸಂಸ್ಥೆಗಳಲ್ಲಿ ಇಟ್ಟಿರುವ ವ್ಯಕ್ತಿಯನ್ನು ಮತ್ತು ಆಭರಣಗಳ ವಿಲೇವಾರಿಗೆ ಸಹಕರಿಸಿದ ಆತನ ಸ್ನೇಹಿತನನ್ನು ಹೊನ್ನಾವರ
ಪೊಲೀಸರು ಬಂಧಿಸಿದ್ದಾರೆ.

ಕಾಸರಕೋಡ ದೇವಸ್ಥಾನಕೇರಿ ನಿವಾಸಿ ಧನುಶ ಶ್ರೀಧರ ಗೌಡ ಮತ್ತು ಗೇರುಸೊಪ್ಪ ನಿವಾಸಿ ಗೌರೀಶ ಗಣಪತಿ ಗೌಡ ಬಂಧಿತ ಆರೋಪಿಗಳಾಗಿದ್ದು ಬಂಧಿತರು ಫೈನಾನ್ಸ್ ಸಂಸ್ಥೆಗಳಲ್ಲಿ ಇಟ್ಟ ಸುಮಾರು 17 ಲಕ್ಷ ರೂಪಾಯಿ ಮೌಲ್ಯದ 127.5 ಗ್ರಾಂ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

ದೇವಸ್ಥಾನಕೇರಿ ನಿವಾಸಿ ಪಾರ್ವತಿ ಪಟಗಾರ ಎನ್ನುವವರ ಮನೆಯ ಕಬ್ಬಿಣದ ಟ್ರಂಕಿನಲ್ಲಿ ಇಟ್ಟ 128 ಗ್ರಾಂ ಆಭರಣಗಳನ್ನು ಮೇ 20 ರ ರಾತ್ರಿ 8 ಗಂಟೆಯಿಂದ ಜೂನ್ 7 ರ ನಡುವಿನ ಅವಧಿಯಲ್ಲಿ ಕಳ್ಳತನ ನಡೆಸಿರುವ ಕುರಿತಂತೆ ದೂರು ದಾಖಲಾಗಿತ್ತು. ಆರೋಪಿತ ಟ್ರಂಕಿನಲ್ಲಿರುವ ಚಿಕ್ಕ ಬ್ಯಾಗಿನಲ್ಲಿ ಇಟ್ಟ 4 ಲಕ್ಷ ಮೌಲ್ಯದ 40 ಗ್ರಾಂ ಮಂಗಳಸೂತ್ರ,1.5 ಲಕ್ಷ ಮೌಲ್ಯದ 15 ಗ್ರಾಂ ಮಂಗಳಸೂತ್ರ, 2 ಲಕ್ಷ ಮೌಲ್ಯದ 20 ಗ್ರಾಂ ನೆಕ್ಲೆಸ್, 3.5 ಲಕ್ಷ ಮೌಲ್ಯದ 35 ಗ್ರಾಂ ಹವಳದ ಸರ, 80 ಸಾವಿರ ಮೌಲ್ಯದ 8 ಗ್ರಾಂ ಚೈನ್,50 ಸಾವಿರ ಮೌಲ್ಯದ 5 ಗ್ರಾಂ ಚೈನ್, 50 ಸಾವಿರ ಮೌಲ್ಯದ 5 ಗ್ರಾಂ ಉಂಗುರವನ್ನು ಕಳ್ಳತನ ಮಾಡಿರುವ ಕುರಿತಂತೆ ದೂರು ದಾಖಲಿಸಿ ಆರೋಪಿತ ದರ್ಶನನ ಮೇಲೆ ಸಂಶಯ ಇರುವುದಾಗಿ ತಿಳಿಸಲಾಗಿತ್ತು.

ಆರೋಪಿತನ ವಿಚಾರಣೆ ನಡೆಸಿರುವ ಪೊಲೀಸರು ಹೊನ್ನಾವರದ ಮಣಪುರಂ ಫೈನಾನ್ಸ್, ಮುತ್ತೋಟ್ ಪಿನ್ ಕಾರ್ಪ್ ಮತ್ತು ಗಿರೀಶ ಗೌಡನ ಬಳಿ ಇರುವ ಮತ್ತು ಆತ ಮಾರಾಟ ಮಾಡಿರುವ ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠ ದೀಪನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ,ಡಿ.ವೈ.ಎಸ್.ಪಿ ಗಿರೀಶ್ ಮಾರ್ಗದರ್ಶನದಲ್ಲಿ ಹೊನ್ನಾವರ ಪೊಲೀಸ್ ನಿರೀಕ್ಷಕ ಸಿದ್ಧರಾಮೇಶ್ವರ ಅವರ ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕರುಗಳಾದ ಮಹಾಂತೇಶ ವಾಲ್ಮೀಕಿ,ಸಂಗೀತಾ,ರೇಣುಕಾ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !