ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೊಮ್ಯಾಟೋಗಾಗಿ ಇಬ್ಬರು ಮಕ್ಕಳನ್ನು ಒತ್ತೆಯಾಳಾಗಿಟ್ಟ ಆಘಾತಕಾರಿ ಪ್ರಕರಣ ಒಡಿಶಾದ ಬೆಳಕಿಗೆ ಬಂದಿದೆ. ಗ್ರಾಹಕರೊಬ್ಬರು ಇಬ್ಬರು ಮಕ್ಕಳನ್ನು ಅಂಗಡಿಯಲ್ಲಿಯೇ ಬಿಟ್ಟು ಟೊಮ್ಯಾಟೋ ಸಮೇತ ಓಡಿ ಹೋಗಿದ್ದಾರೆ.
ಕಟಕ್‌ನ ಚತ್ರಬಜಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಎಂದಿನಂತೆ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಮಾರುತ್ತಿದ್ದ ಅಂಗಡಿ ಬಳಿ ಬಂದ ವ್ಯಕ್ತಿ ಎರಡು ಕೆ.ಜಿ.ಟೊಮ್ಯಾಟೋ ಖರೀದಿಸಿದ್ದಾನೆ. ತನಗೆ ಇನ್ನೂ ಹತ್ತು ಕೆಜಿ ಟೊಮ್ಯಾಟೊ ಅವಶ್ಯಕತೆಯಿದ್ದು, ಕಾರಿನಲ್ಲಿ ಪರ್ಸ್ ಬಿಟ್ಟು ಬಂದಿದ್ದೇನೆ ಅದನ್ನು ತರುವವರೆಗೆ ಮಕ್ಕಳನ್ನು ನೋಡಿಕೊಳ್ಳಿ ಅಂತೇಳಿ ಅಂಗಡಿ ಬಳಿ ಬಿಟ್ಟು ಹೋಗಿದ್ದಾನೆ.
ಎಷ್ಟೋ ಹೊತ್ತಾದರೂ ವಾಪಸ್ ಬಾರದೆ ಇದ್ದಾಗ ಅಂಗಡಿಯವರಿಗೆ ಅನುಮಾನ ಬಂದು ಇಬ್ಬರು ಮಕ್ಕಳನ್ನು ವಿಚಾರಣೆ ನಡೆಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಇಬ್ಬರೂ ಬಾರಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ನಂದನ್‌ಕಾನನ್ ಮೂಲದವರಾಗಿದ್ದು, ಮಕ್ಕಳ ಹೆಸರು ಬಬ್ಲೂ ಬ್ಯಾರಿಕ್, ಎಸ್ಕಾರ್ ಮಹಂತಿ. ಇಲ್ಲಿಗೆ ಕರೆತಂದವರು ಯಾರೋ ಗೊತ್ತಿಲ್ಲ ಎಂದು ಮಕ್ಕಳಿಬ್ಬರೂ ಹೇಳಿದ್ದಾರೆ. ಕೆಲಸ ಕೊಡಿಸಿ 300 ರೂ.ನೀಡುವುದಾಗಿ ಹೇಳಿ ಇಬ್ಬರನ್ನೂ ಕರೆತಂದಿದ್ದರು ಎಂಬ ಸತ್ಯ ಬೆಳಕಿಗೆ ಬಂದಿದೆ.
ವಿಚಾರ ತಿಳಿದ ಬಳಿಕ ವ್ಯಾಪಾರಿ ತನ್ನ ನಷ್ಟವನ್ನು ಅರಿತುಕೊಂಡು ಇಬ್ಬರೂ ಅಪ್ರಾಪ್ತ ಮಕ್ಕಳನ್ನು ಬಿಟ್ಟು ಕಳಿಸಿದ್ದಾರೆ.