ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿಢೀರ್ ಪ್ರವಾಹದಿಂದಾಗಿ ಶಾಲೆಯಿಂದ ಮನೆಗೆ ಹೋಗುತ್ತಿದ್ದ ಇಬ್ಬರು ಬಾಲಕಿಯರು ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ನಾಲ್ವರು ಬಾಲಕಿಯರು ಶಾಲೆಯಿಂದ ಮನೆಗೆ ತೆರಳುತ್ತಿದ್ದಾಗ ಕಥುವಾದಲ್ಲಿ ಪ್ರವಾಹದಲ್ಲಿ ಸಿಲುಕಿದ್ದರು. ಈ ಭೀಕರ ಅಪಘಾತದಲ್ಲಿ ಇಬ್ಬರು ಬಾಲಕಿಯರು ಪ್ರಾಣ ಕಳೆದುಕೊಂಡಿದ್ದಾರೆ. ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಬೆಟ್ಟದ ಹೊಳೆ ದಾಟುವಾಗ ಬಾಲಕಿಯರು ಕೊಚ್ಚಿಕೊಂಡು ಹೋಗಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಇಬ್ಬರು ಬಾಲಕಿಯರನ್ನು ರಕ್ಷಿಸಲಾಗಿದ್ದು, ಇನ್ನಿಬ್ಬರು ಬಾಲಕಿಯರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ಮೋನಿಕಾ ದೇವಿ ಮತ್ತು ರಾಧಾದೇವಿ ಎಂದು ಗುರುತಿಸಲಾಗಿದೆ. ಮೃತರಿಬ್ಬರೂ 6ನೇ ತರಗತಿಯ ವಿದ್ಯಾರ್ಥಿಗಳು. ಪ್ರವಾಹದಲ್ಲಿ ಬದುಕುಳಿದ ಬಾಲಕಿಯರನ್ನು ಬಿಲ್ಲವರ ಉಪ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ರತಿಕೂಲ ವಾತಾವರಣದಲ್ಲಿ ಮಕ್ಕಳನ್ನು ಹೊರಗೆ ಹೋಗಲು ಬಿಡಬೇಡಿ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಪೋಷಕರಿಗೆ ಸಲಹೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸಂತ್ರಸ್ತ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ಬೆಂಬಲದ ಭರವಸೆ ನೀಡಿದ್ದಾರೆ. “ಕಥುವಾದಲ್ಲಿ ಸಂಭವಿಸಿದ ದುರಂತ ಪ್ರವಾಹದಲ್ಲಿ ಅಮೂಲ್ಯ ಮಕ್ಕಳು ಪ್ರಾಣ ಕಳೆದುಕೊಂಡಿರುವುದು ದುಃಖಕರವಾಗಿದೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಸಂತ್ರಸ್ತ ಕುಟುಂಬಗಳಿಗೆ ಎಲ್ಲ ರೀತಿಯ ನೆರವು ನೀಡುವಂತೆ ಜಿಲ್ಲಾಡಳಿತದ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಲೆ.ಗವರ್ನರ್ ತಿಳಿಸಿದ್ದಾರೆ.