ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ಬುಧವಾರ ವಕ್ಫ್ ತಿದ್ದುಪಡಿ ಮಸೂದೆಗೆ ಬೆಂಬಲ ನೀಡಿದ ನಂತರ ಜೆಡಿಯುನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಹಲವು ಮುಸ್ಲಿಂ ನಾಯಕರು ನಿತೀಶ್ ಕುಮಾರ್ ವಿರುದ್ಧ ತಿರುಗಿಬಿದಿದ್ದಾರೆ.
ಹಿರಿಯ ನಾಯಕ ಮೊಹಮ್ಮದ್ ಖಾಸಿಂ ಅನ್ಸಾರಿ ಮತ್ತು ಮೊಹಮ್ಮದ್ ನವಾಜ್ ಮಲಿಕ್ ಗುರುವಾರ ಪಕ್ಷ ಮತ್ತು ತಮ್ಮ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ನಿಲುವು ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿಯುತ್ತದೆ ಎಂದು ನಂಬಿದ್ದ ಲಕ್ಷಾಂತರ ಭಾರತೀಯ ಮುಸ್ಲಿಮರ ನಂಬಿಕೆಯನ್ನು ಛಿದ್ರಗೊಳಿಸಿದೆ ಎಂದು ಅವರು ನಿತೀಶ್ ಕುಮಾರ್ ಅವರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ನಿತೀಶ್ ಕುಮಾರ್‌ಗೆ ಬರೆದ ರಾಜೀನಾಮೆ ಪತ್ರದಲ್ಲಿ, ಮಲಿಕ್ , ನೀವು ಸಂಪೂರ್ಣವಾಗಿ ಜಾತ್ಯತೀತ ಸಿದ್ಧಾಂತದ ಧ್ವಜಧಾರಿ ಎಂದು ಲಕ್ಷಾಂತರ ಭಾರತೀಯ ಮುಸ್ಲಿಮರು ಅಚಲ ನಂಬಿಕೆಯನ್ನು ಹೊಂದಿದ್ದರು. ಆದರೆ ಈಗ ಈ ನಂಬಿಕೆ ಮುರಿದುಹೋಗಿದೆ. ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ಜೆಡಿ(ಯು) ತೆಗೆದುಕೊಂಡ ನಿಲುವು ಸಮರ್ಪಿತ ಭಾರತೀಯ ಮುಸ್ಲಿಮರು ಮತ್ತು ನಮ್ಮಂತಹ ಪಕ್ಷದ ಕಾರ್ಯಕರ್ತರಿಗೆ ತೀವ್ರವಾಗಿ ನೋವುಂಟು ಮಾಡಿದೆ. ಲಾಲನ್ ಸಿಂಗ್ ಲೋಕಸಭೆಯಲ್ಲಿ ಮಾತನಾಡಿದ ಮತ್ತು ಈ ಮಸೂದೆಯನ್ನು ಬೆಂಬಲಿಸಿದ ರೀತಿ ನಮಗೆ ನಿರಾಶೆಯನ್ನುಂಟುಮಾಡಿದೆ ಎಂದಿದ್ದಾರೆ.
ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಗೆ ಜೆಡಿಯು ಬೆಂಬಲವನ್ನು ನೀಡಿದ ನಂತರ ನಾವು ವಂಚನೆಗೊಳಗಾಗಿದ್ದೇವೆ. ಈಗ ಜಾತ್ಯತೀತ ಮತ್ತು ಕೋಮುವಾದಿ ಶಕ್ತಿಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲದಂತಾಗಿದೆ ಎಂದು ಮಾಜಿ ರಾಜ್ಯಸಭಾ ಸದಸ್ಯ ಮತ್ತು ಜೆಡಿಯು ಪ್ರಧಾನ ಕಾರ್ಯದರ್ಶಿ ಗುಲಾಂ ರಸೂಲ್ ಬಲ್ಯಾವಿ ಹೇಳಿದ್ದಾರೆ.
ಎರಡಾ-ಎ-ಶರಿಯಾ ಪರವಾಗಿ ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) 31 ಪುಟಗಳ ಸಲಹೆಯನ್ನು ಸಲ್ಲಿಸಿದ್ದೆ. ಲೋಕಸಭೆಯಲ್ಲಿ ಮಸೂದೆ ಮಂಡನೆಯಾಗುವ ಮುನ್ನಾ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದೆ. ಆದರೆ, ಅವರ ಸಲಹೆಗಳಿಗೆ ಜೆಪಿಸಿ ಅಥವಾ ಸಿಎಂ ನಿತೀಶ್ ಕಿವಿಗೊಡಲಿಲ್ಲ.
ಈ ಸಂಬಂಧ ಶೀಘ್ರದಲ್ಲೇ ನಾವು ಎರಾಡಾ-ಎ-ಶರಿಯಾ (ಬಿಹಾರ, ಜಾರ್ಖಂಡ್ ಮತ್ತು ಒಡಿಶಾ) ಸಭೆಯನ್ನು ಕರೆಯಲಿದ್ದೇವೆ. ತದನಂತರ ಮುಂದಿನ ಕ್ರಮವನ್ನು ಕೈಗೊಳ್ಳಲಿದ್ದೇವೆ. ಅಲ್ಲದೇ ನ್ಯಾಯಾಲಯದಲ್ಲಿ ಮಸೂದೆಯನ್ನು ಪ್ರಶ್ನಿಸಲು ನಾವು ಕಾನೂನು ತಜ್ಞರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಪಾಟ್ನಾದಲ್ಲಿ ತಿಳಿಸಿದರು.
ಬಲ್ಯಾವಿ ಮಾತ್ರವಲ್ಲ. ಜೆಡಿಯು ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ಮತ್ತು ಬಿಹಾರ ವಿಧಾನ ಪರಿಷತ್ತಿನ ಉಪಾಧ್ಯಕ್ಷ ಸಲೀಂ ಪರ್ವೇಜ್ ಅವರು ಶೀಘ್ರದಲ್ಲೇ ಮುಖ್ಯಮಂತ್ರಿ ಮತ್ತು ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿ ಮಸೂದೆಯ ಬಗ್ಗೆ ಪಕ್ಷದ ಮುಸ್ಲಿಂ ಮುಖಂಡರ ಅಸಮಾಧಾನವನ್ನು ತಿಳಿಸುವುದಾಗಿ ಹೇಳಿದ್ದಾರೆ.