ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡು ಪ್ರತ್ಯೇಕ ಘಟನೆಯಲ್ಲಿ, ಕಾಲುವೆಯ ನೀರಿನಲ್ಲಿ ಆಟವಾಡಲು ಹೋಗಿದ್ದ ಇಬ್ಬರು ಅಪ್ರಾಪ್ತರು ನೀರು ಪಾಲಾದ ಘಟನೆ ರಾಯಚೂರಿನ ಗಾಣದಾಳ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ. ಗ್ರಾಮದ ರಾಜಲಬಂಡಾ ಕಾಲುವೆಯಲ್ಲಿ ಈ ಘಟನೆ ಜರುಗಿದೆ.
ತೆಲಂಗಾಣದ ಗದ್ವಾಲ್ ಮೂಲದ ಅಂಜಲಿ (17) ಹಾಗೂ ಆಂಧ್ರದ ಎಮ್ಮಿಗನೂರು ಗ್ರಾಮದ
ರಘು (14) ಎಂಬವರೇ ನೀರುಪಾಲಾದವರು ಎಂದು ಗುರುತಿಸಲಾಗಿದೆ. ಗಾಣದಾಳ ಗ್ರಾಮದಲ್ಲಿ ನಿನ್ನೆ ಪಂಚಮುಖಿ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ನಡೆದಿತ್ತು. ಹೀಗಾಗಿ, ಪೋಷಕರೊಂದಿಗೆ ಮಕ್ಕಳು ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಕಾಲುವೆ ನೀರಿನಲ್ಲಿ ಆಟವಾಡಲು ಹೋದಾಗ ಕಾಲುಜಾರಿ ಬಿದ್ದು ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಲುವೆಯಲ್ಲಿ ಮಕ್ಕಳಿಗಾಗಿ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ಇಡಪನೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ರಘು ಎನ್ನುವ ಬಾಲಕನ ದೇಹ ಪತ್ತೆಯಾಗಿದ್ದು, ಬಾಲಕಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಇಡಪನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.