Thursday, June 30, 2022

Latest Posts

ನಿತಿನ್ ಗಡ್ಕರಿಯಿಂದ ಎರಡು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಅನುಮೋದನೆ

ಹೊಸ ದಿಗಂತ ವರದಿ, ಚಿತ್ರದುರ್ಗ:

ಚಿತ್ರದುರ್ಗ ಸಂಸದರು ಹಾಗೂ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ಅವರು ಇತ್ತೀಚೆಗೆ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಅತ್ಯಗತ್ಯ, ಅಭಿವೃದ್ಧಿ ಕಾಮಗಾರಿಗಳ ತ್ವರಿತ ಅನುಷ್ಠಾನ ಕೋರಿ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಪ್ರಸ್ತಾವನೆಗಳ ಅನುಮೋದನೆಗೆ ಸಚಿವ ನಿತಿನ್ ಗಡ್ಕರಿ ಸಕಾರತ್ಮಕವಾಗಿ ಸ್ಪಂದಿಸಿದ್ದು, ಚಿತ್ರದುರ್ಗ ಜಿಲ್ಲೆಯ ಎರಡು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಪ್ರಸಕ್ತ ಸಾಲಿನ ವಾರ್ಷಿಕ ಯೋಜನೆಯ ಅನುಮೋದನೆ ದೊರೆತಿದ್ದು, ಕಾಮಗಾರಿಗಳ ಅಂದಾಜು ಪಟ್ಟಿ ಅಂತಿಮ ಅನುಮೋದನೆ ಹಂತದಲ್ಲಿರುತ್ತದೆ.
ರಾಷ್ಟ್ರೀಯ ಹೆದ್ದಾರಿ-150ಎ ಹಿರಿಯೂರಿನಿಂದ ಹುಳಿಯಾರುವರೆಗೆ ಗಟ್ಟಿಬಾಹುಗಳುಳ್ಳ 31 ಕಿ.ಮೀಗೆ ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುವುದಕ್ಕೆ 140 ಕೋಟಿ ಹಾಗೂ ರಾಷ್ಟ್ರೀಯ ಹೆದ್ದಾರಿ-173 ಹೊಳಲ್ಕೆರೆಯಿಂದ ಹೊಸದುರ್ಗದವರೆಗೆ 31.30 ಕಿ.ಮೀಗೆ ದ್ವಿಪಥ ರಸ್ತೆ ಅಭಿವೃದ್ಧಿಪಡಿಸುವುದಕ್ಕೆ 170 ಕೋಟಿ ರೂ. ಕಾಮಗಾರಿಗಳಿಗೆ ಅನುಮೋದನೆ ದೊರಕಿದೆ.
ರಾಜ್ಯದ ಚಿತ್ರದುರ್ಗ, ಚಳ್ಳಕೆರೆ, ಪವಾಗಡ ಹಾಗೂ ಆಂಧ್ರಪ್ರದೇಶದ ಪೆನಕೊಂಡ, ಪುಟ್ಟಪರ್ತಿ, ಬುಕ್ಕಾಪಟ್ಟಣಂವರೆಗೆ 180 ಕಿಮೀ ಉದ್ದದ ಹಾಲಿ ರಾಜ್ಯದ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ. ಈ ಪ್ರಸ್ತಾವನೆಯಿಂದ ಅಂತರರಾಜ್ಯ ಸಂಪರ್ಕ, ಮಧ್ಯ ಕರ್ನಾಟಕ ಕಾರವಳಿ ಕರ್ನಾಟಕದ ಭಾಗದಿಂದ ಹೈದರಬಾದ್ ಸಂಪರ್ಕಿಸಲು ಅನುಕೂಲವಾಗಲಿದೆ.
ರಾಷ್ಟ್ರೀಯ ಹೆದ್ದಾರಿ-173 ಮೂಡಿಗೆರೆಯಿಂದ ಚಿಕ್ಕಮಗಳೂರು, ಕಡೂರು, ಹೊಸದುರ್ಗ ಮಾರ್ಗವಾಗಿ ಹೊಳಲ್ಕೆರೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯನ್ನು ಚಿಕ್ಕಜಾಜೂರು ಮಾರ್ಗವಾಗಿ ದಾವಣಗೆರೆ ಜಿಲ್ಲೆ ಆನಗೋಡುವೆರೆಗೆ ವಿಸ್ತರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಕೇಂದ್ರ ರಸ್ತೆ ನಿಧಿ ಯೋಜನೆಯಡಿಯಲ್ಲಿ ಚಿತ್ರದುರ್ಗ, ಗೋನೂರು, ಬೆಳಗಟ್ಟ, ಹಾಯ್ಕಲ್, ನಾಯಕನಹಟ್ಟಿ ಸಂಪರ್ಕಿಸುವ ೩೦ ಕಿಮೀ ಉದ್ದದ ಜಿಲ್ಲಾ ಮುಖ್ಯ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ದೊಣೆಹಳ್ಳಿ, ನಾಯಕನಹಟ್ಟಿ, ಗರಣಿ ಕ್ರಾಸ್ ಸಂಪರ್ಕಿಸುವ ರಾಜ್ಯ ಹೆದ್ದಾರಿಯನ್ನು ಕರ್ನಾಟಕ ರಾಜ್ಯ ಹೆದ್ದಾರಿ ಯೋಜನೆಯಡಿಯಲ್ಲಿ ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವರಾದ ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss