ಚಿಕ್ಕಮಗಳೂರಿನಲ್ಲಿ ಒಂದೇ ದಿನ ಇಬ್ಬರು ಹೃದಯಾಘಾತಕ್ಕೆ ಬಲಿ: ಆತಂಕದಲ್ಲಿ ರಾಜ್ಯದ ಜನತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಹೃದಯಾಘಾತದ (Heart Attack) ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿದ್ದು, ಇದೀಗ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿ ಒಂದೇ ದಿನ ಎರಡು ಪ್ರಾಣಹಾನಿ ಸಂಭವಿಸಿದ ಘಟನೆ ಅಲ್ಲಿನ ಜನರಲ್ಲಿ ಆತಂಕ ಸೃಷ್ಟಿಸಿದೆ. 29 ವರ್ಷದ ಮೀನಾಕ್ಷಿ ಹಾಗೂ 75 ವರ್ಷದ ವೃದ್ಧೆ ಸುಮಿತ್ರೆಗೌಡ ಇಬ್ಬರೂ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಮೂಡಿಗೆರೆ ತಾಲೂಕಿನ ಬೆಳಗೋಡು ಗ್ರಾಮದಲ್ಲಿ ವಾಸವಿದ್ದ ಯುವತಿ ಮೀನಾಕ್ಷಿ ಕೂಲಿ ಕೆಲಸಗಾರರಾಗಿದ್ದರು. ತೀವ್ರ ಜ್ವರದಿಂದ ಬಳಲುತ್ತಿದ್ದ ಅವರು, ವೈದ್ಯಕೀಯ ಚಿಕಿತ್ಸೆಗೆ ತೆರಳುವ ಮಾರ್ಗ ಮಧ್ಯೆ ತೀವ್ರ ಎದೆನೋವಿನಿಂದಾಗಿ ಕಾರಿನಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಇದೇ ದಿನ, ಮೂಡಿಗೆರೆ ತಾಲೂಕಿನ ಬಿ.ಹೊಸಳ್ಳಿ ಗ್ರಾಮದ 75 ವರ್ಷದ ವೃದ್ಧೆ ಸುಮಿತ್ರೆಗೌಡ ತಮ್ಮ ಮನೆಲ್ಲೇ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ತಕ್ಷಣವೇ ವೈದ್ಯಕೀಯ ನೆರವು ಲಭಿಸದ ಕಾರಣ ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ, ವಯೋವೃದ್ಧರಲ್ಲಿ ಸಹ ಹೃದಯಾಘಾತದ ಅಪಾಯ ಹೆಚ್ಚಿರುವುದನ್ನು ಮತ್ತೆ ದೃಢಪಡಿಸಿದೆ.

ಇತ್ತೀಚೆಗೆ ರಾಜ್ಯದ ವಿವಿಧೆಡೆ ಹೃದಯಾಘಾತದಿಂದ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು, ರಾಜ್ಯದ ಜನರಲ್ಲಿ ಭೀತಿಯ ವಾತಾವರಣವನ್ನುಂಟು ಮಾಡುತ್ತಿದೆ. ಹಾಸನದಲ್ಲಿ ಮಾತ್ರ ಕಳೆದ 40 ದಿನಗಳಲ್ಲಿ 23ಕ್ಕೂ ಹೆಚ್ಚು ಹೃದಯಾಘಾತದ ಸಾವಿನ ಪ್ರಕರಣಗಳು ವರದಿಯಾಗಿದ್ದು, ಇವುಗಳಲ್ಲಿ ಹೆಚ್ಚಿನವರು 19-45 ವರ್ಷದವರಾಗಿದ್ದಾರೆ.

ಈ ಘಟನೆಗಳು ರಾಜ್ಯದಲ್ಲಿ ಹೃದಯ ಸಂಬಂಧಿತ ಕಾಯಿಲೆಗಳ ಮೇಲೆ ಗಂಭೀರವಾಗಿ ಗಮನಹರಿಸುವ ಅಗತ್ಯವಿದೆ ಎಂಬ ಎಚ್ಚರಿಕೆಯನ್ನು ನೀಡುತ್ತಿವೆ. ತಜ್ಞರ ಅಭಿಪ್ರಾಯದಲ್ಲಿ, ಜೀವನಶೈಲಿಯಲ್ಲಿನ ಬದಲಾವಣೆ, ಆಹಾರದಲ್ಲಿ ಅತಿಯಾದ ಕೊಬ್ಬು, ನಿರಾಯಾಸ ಜೀವನಶೈಲಿ ಹಾಗೂ ತೀವ್ರ ಒತ್ತಡ ಈ ಸಮಸ್ಯೆಗೆ ಕಾರಣವಾಗಬಹುದು. ಸರ್ಕಾರ ಹಾಗೂ ಆರೋಗ್ಯ ಇಲಾಖೆ ಈ ಬಗ್ಗೆ ತಕ್ಷಣ ಕಾರ್ಯಪ್ರವೃತ್ತವಾಗಬೇಕು ಎಂಬುದು ಸಾರ್ವಜನಿಕರ ಮನವಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!