ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಜಿನ್ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿದ್ದ ನೌಕಾಪಡೆಯ ಸ್ಪೀಡ್‌ಬೋಟ್ ಬುಧವಾರ ಮುಂಬೈ ಕರಾವಳಿಯಲ್ಲಿ ಪ್ರಯಾಣಿಕರಿದ್ದ ದೋಣಿಗೆ ಡಿಕ್ಕಿ ಹೊಡೆದು ಪರಿಣಾಮ 13 ಮಂದಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಮಗು ಸೇರಿದಂತೆ ಇನ್ನೂ ಇಬ್ಬರು ಪ್ರಯಾಣಿಕರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಎರಡೂ ಹಡಗುಗಳಲ್ಲಿದ್ದ 113 ಜನರಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡವರು ಸೇರಿದಂತೆ 98 ಜನರನ್ನು ರಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ನಾಪತ್ತೆಯಾದ ಇಬ್ಬರನ್ನು 43 ವರ್ಷದ ಹಂಸರಾಜ್ ಭಾಟಿ ಮತ್ತು ಏಳು ವರ್ಷದ ಜೋಹಾನ್ ಮೊಹಮ್ಮದ್ ನಿಸಾರ್ ಅಹ್ಮದ್ ಪಠಾಣ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಸಹಾಯದಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಬುಧವಾರ ಮಧ್ಯಾಹ್ನ ಗೇಟ್‌ವೇ ಆಫ್ ಇಂಡಿಯಾದಿಂದ ಎಲಿಫೆಂಟಾ ದ್ವೀಪಕ್ಕೆ 100ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ‘ನೀಲ್ ಕಮಲ್’ ಎಂಬ ಪ್ರಯಾಣಿಕ ದೋಣಿಗೆ ನೌಕಾಪಡೆಯ ಸ್ಪೀಡ್‌ಬೋಟ್ ಡಿಕ್ಕಿ ಹೊಡೆದಿತ್ತು. ದುರಂತದಲ್ಲಿ ನೌಕಾಪಡೆಯ ಸಿಬ್ಬಂದಿ ಮತ್ತು ಇಬ್ಬರು ಗುತ್ತಿಗೆ ನೌಕಾ ಸಿಬ್ಬಂದಿ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ.