ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಅವರು ರಾಧಿಕಾ ಮರ್ಚೆಂಟ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಅದ್ಧೂರಿ ವಿವಾಹ ಮಹೋತ್ಸವದಲ್ಲಿ ಉದ್ಯಮಿಗಳು, ರಾಜಕಾರಣಿಗಳು ಹಾಗೂ ಬಾಲಿವುಡ್ ಸೆಲಿಬ್ರಿಟಿಗಳು ಪಾಲ್ಗೊಂಡಿದ್ದರು.ಇವರ ನಡುವೆ ಆಹ್ವಾನಿಸದೆ ಮದುವೆಯಲ್ಲಿ ಪಾಲ್ಗೊಂಡಿದ್ದ ಇಬ್ಬರು ವ್ಯಕ್ತಿಗಳು ಪೊಲೀಸರ ಅತಿಥಿಗಳಾಗಿದ್ದಾರೆ.
ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಕೆಲಸ ಮಾಡುವ ಭದ್ರತಾ ವಿಭಾಗದ ಬಲರಾಮ್ ಸಿಂಗ್ ಲಾಲ್ ಅವರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅನಂತ್ ಅಂಬಾನಿ ಅವರ ಮದುವೆ ಸ್ಥಳದ ಮೊದಲ ಮಹಡಿಯಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಭದ್ರತಾ ಸಿಬ್ಬಂದಿಗೆ ಅನುಮಾನ ಬಂದಿದೆ. ಬಳಿಕ ಆ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದಾಗ ಅಕ್ರಮವಾಗಿ ಒಳನುಸುಳಿರುವುದು ಕಂಡುಬಂದಿದೆ. ಆತ ಜಿಯೋ ವರ್ಲ್ಡ್ ಸೆಂಟರ್‌ನ ಗೇಟ್ ನಂ.10ರಿಂದ ಪ್ರವೇಶಿಸಿರುವುದು ಪತ್ತೆಯಾಗಿದೆ. ಆರೋಪಿಯ ಹೆಸರು ಮೊಹಮ್ಮದ್ ಶಫಿ ಶೇಖ್, ಮದುವೆಯ ಸ್ಥಳದ ಬಗ್ಗೆ ತುಂಬಾ ಉತ್ಸುಕನಾಗಿದ್ದೆ ಮತ್ತು ಅದಕ್ಕಾಗಿಯೇ ಈ ರೀತಿಯ ಕೆಲಸ ಮಾಡಿದೆ ಎಂದು ಆತ ಒಪ್ಪಿಕೊಂಡಿದ್ದಾನೆ. ಮುಂಬೈ ಮೂಲದ ವಿರಾರ್ ನಿವಾಸಿಯಾಗಿದ್ದಾನೆ.
ಇನ್ನೊಬ್ಬ ಯೂಟ್ಯೂಬರ್ ಆಗಿದ್ದು ಆಂಧ್ರಪ್ರದೇಶ ಮೂಲದವನಾಗಿದ್ದಾನೆ. ಜಿಯೋ ವರ್ಲ್ಡ್ ಸೆಂಟರ್‌ನ ಪೆವಿಲಿಯನ್ ನಂಬರ್ ಒನ್‌ನಲ್ಲಿ ಅನುಮಾನ ಬಂದು ವಿಚಾರಿಸಿದಾಗ ಆತನು ಆಹ್ವಾನ ಇಲ್ಲದೆ ಮದುವೆಗೆ ಬಂದಿದ್ದು ತಿಳಿದಿದೆ. ಆತನ ಹೆಸರು ವೆಂಕಟೇಶ್ ಆಲೂರಿ. ಮೊದಲು ಈತನನ್ನು ಗೇಟ್ ಸಂಖ್ಯೆ 23ರಲ್ಲಿ ನಿಲ್ಲಿಸಿ ಅಲ್ಲಿಂದ ಹೊರಡುವಂತೆ ಹೇಳಲಾಯಿತು. ಆದರೆ ವೆಂಕಟೇಶ್ ಆಲೂರಿ ತನ್ನ ಪ್ರಯತ್ನ ಬಿಡದೆ ಗೇಟ್ ಸಂಖ್ಯೆ 19 ಮೂಲಕ ವಿವಾಹ ನಡೆಯುತ್ತಿದ್ದ ಸ್ಥಳಕ್ಕೆ ಪ್ರವೇಶಿಸಿದ್ದಾನೆ. ಆತನನ್ನು ಹಿಡಿದ ನಂತರ ಭದ್ರತಾ ಸಿಬ್ಬಂದಿ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಮದುವೆಯ ವೀಡಿಯೊವನ್ನು ರೆಕಾರ್ಡ್ ಮಾಡಲು ಮತ್ತು ಅದನ್ನು ಸ್ಟ್ರೀಮ್ ಮಾಡಲು ಬಯಸಿದ್ದಾಗಿ ಯೂಟ್ಯೂಬರ್ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ. ಎರಡೂ ಪ್ರಕರಣಗಳಲ್ಲಿ ಕಾನೂನು ಕ್ರಮಕೈಗೊಂಡ ಪೊಲೀಸರು ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿ ನಂತರ ಬಿಡುಗಡೆ ಮಾಡಿದ್ದಾಗಿ ತಿಳಿಸಿದ್ದಾರೆ.