ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂಸಾಚಾರ ಪೀಡಿತ ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಶಸ್ತ್ರಸಜ್ಜಿತ ಉದ್ರಿಕ್ತರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಓರ್ವ ಸೇನಾ ಯೋಧ ಸೇರಿದಂತೆ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ.
ರಾಜ್ಯ ರಾಜಧಾನಿ ಇಂಫಾಲ್‌ನಿಂದ 50 ಕಿ.ಮೀ ದೂರದಲ್ಲಿರುವ ಫೌಬಕ್‌ಚಾವೊ ಇಖೈ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗುರುವಾರ ಬೆಳಿಗ್ಗೆ ಆರಂಭವಾದ ಗುಂಡಿನ ದಾಳಿ ಶುಕ್ರವಾರ ಬೆಳಗಿನ ಜಾವದವರೆಗೂ ಮುಂದುವರೆದಿತ್ತು.
ಈ ವೇಳೆ ಸಮೀಪದಲ್ಲಿ ಜನರಿಲ್ಲದೆ ಖಾಲಿ ಇದ್ದ ಮನೆಯೊಂದಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡಿರುವವರನ್ನು ಮಣಿಪುರ ಪೊಲೀಸ್ ಕಮಾಂಡೋ ನಮೀರಕ್ಪಾಮ್ ಇಬೊಮ್ಚಾ(40) ಹಾಗೂ ಸೇನಾ ಯೋಧ ಕುಮಾನ್ ಎಂದು ಗುರುತಿಸಲಾಗಿದೆ.
ಘಟನಾ ಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡ್ರೋನ್ ಕಾರ್ಯಾಚರಣೆ ನಡೆಸಲಾಗುತ್ತಿದೆ. ದುಷ್ಕರ್ಮಿಗಳು ಗಾಯಗೊಂಡಿದ್ದಾರೆಯೇ ಅಥವಾ ಮೃತರಾಗಿದ್ದಾರೆಯೇ ಎನ್ನುವ ಬಗ್ಗೆ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಮೈತೇಯಿ ಮತ್ತು ಕುಕಿ ಸಮುದಾಯದ ನಡುವಿನ ಸಂಘರ್ಷ ಹಲವು ಅಹಿತಕರ ಘಟನೆಗಳಿಗೆ ಕಾರಣವಾಗಿದೆ. ಈವರೆಗೆ 160ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.