ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂಡಮಾರುತದಿಂದಾಗಿ ಪೂರ್ವ ಲಿಬಿಯಾದಲ್ಲಿ ಭಾರೀ ಮಳೆಯಾಗಿದ್ದು, ಯಮಸ್ವರೂಪಿ ಪ್ರವಾಹಕ್ಕೆ 2,000ಜನ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಕ್ಕೂ ಹೆಚ್ಚು ಜನ ಕಣ್ಮರೆಯಾಗಿರುವುದಾಗಿ ಪೂರ್ವ ಲಿಬಿಯಾದ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಚಂಡಮಾರುತ ಹಾಗೂ ಬಿರುಗಾಳಿಯಿಂದಾಗಿ ಡೇನಿಯಲ್ ಲಿಬಿಯಾದಲ್ಲಿ ಭಾರೀ ಹಾನಿಯನ್ನುಂಟುಮಾಡಿದೆ. ಎತ್ತ ನೋಡಿದರೂ ನೀರೋ.. ನೀರು. ಕಣ್ಣಾಡಿಸಿದಷ್ಟೂ ಜಲಾವೃತವಾಗಿರುವ ಕಟ್ಟಡಗಳೇ ಕಾಣುತ್ತಿವೆ. ಈ ಚಂಡಮಾರುತದ ಪ್ರಭಾವದಿಂದಾಗಿ ಉತ್ತರ ಆಫ್ರಿಕಾ ದೇಶದ ಕರಾವಳಿ ಪಟ್ಟಣಗಳಲ್ಲಿನ ಕೃಷಿ ಭೂಮಿ ಪ್ರವಾಹದ ನೀರಿನಿಂದ ಮುಳುಗಿವೆ.
ಡರ್ನಾ ಪಟ್ಟಣದಲ್ಲಿ ನದಿಯೊಂದರ ಅಣೆಕಟ್ಟು ಪ್ರವಾಹದಿಂದಾಗಿ ಕುಸಿದು ಬಿದ್ದು ಭಾರೀ ನೀರು ಜನವಸತಿ ಪ್ರದೇಶಕ್ಕೆ ನುಗ್ಗಿದೆ ಎಂದು ಲಿಬಿಯಾ ರಾಷ್ಟ್ರೀಯ ಸೇನೆಯ ವಕ್ತಾರ ಅಹ್ಮದ್ ಮಿಸ್ಮರಿ ತಿಳಿಸಿದರು. ಈ ಪ್ರವಾಹ ದುರಂತದಲ್ಲಿ ನಾಪತ್ತೆಯಾದವರ ಸಂಖ್ಯೆ 6 ಸಾವಿರದವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.
ಪ್ರವಾಹದಿಂದಾಗಿ ಡರ್ನಾ ನಗರದಲ್ಲಿ ಕಟ್ಟಡಗಳು ಮತ್ತು ರಸ್ತೆಗಳು ಹಾನಿಗೊಳಗಾಗಿವೆ. ಲಿಬಿಯಾ ಕರಾವಳಿಯಲ್ಲಿ ಕಟ್ಟಡಗಳು ನೆಲಕ್ಕುರುಳಿವೆ.