ಹೊಸದಿಗಂತ ವರದಿ ಹುಬ್ಬಳ್ಳಿ:
ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ೨.೨೫ ಲಕ್ಷ ರೂ. ಮೌಲ್ಯದ ಆರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ನೇಕಾರನಗರದ ಫಯಾಜ್ ತೊರೆವಾಲೆ ಬಂಧಿತ ಆರೋಪಿ. ಕೆಲ ದಿನಗಳ ಹಿಂದೆ ಬೈಕ್ ಕಳವು ಆಗಿರುವ ಕುರಿತು ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‌ಸ್ಪೆಕ್ಟರ್ ಎಸ್.ಆರ್. ನಾಯಕ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಮಂಟೂರು ರಸ್ತೆಯ ಮೀನು ಮಾರುಕಟ್ಟೆ ಬಳಿ ಗುರುವಾರ ಫಯಾಜ್ ನಂಬರ್ ಪ್ಲೇಟ್ ಇಲ್ಲದ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದಾಗ, ಪೊಲೀಸರು ತಪಾಸಣೆ ನಡೆಸಿದ್ದರು.
ವಿಚಾರಿಸಿದಾಗ ಕಳವು ಮಾಡಿರುವ ಬೈಕ್ ಎಂದು ತಿಳಿದು ಬಂದಿದೆ. ನೇಕಾರ ನಗರದ ಅವನ ಮನೆ ಎದುರು ಮೂರು ಬೈಕ್‌ಗಳನ್ನು ಹಾಗೂ ಸ್ನೇಹಿತನ ಮನೆ ಎದುರು ಎರಡು ಬೈಕ್‌ಗಳನ್ನು ನಿಲ್ಲಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪಿಎಸ್‌ಐ ರವಿ ವಡ್ಡರ, ಸಿಬ್ಬಂದಿ ಸಿ.ಎಫ್. ಅಂಬಿಗೇರ, ಎನ್.ಐ. ನೀಲಗಾರ, ಹನುಮಂತ ಕರಗಾಂವಿ, ಆರ್.ಎಸ್. ಹರಕಿ, ಬಿ.ಎಸ್. ಗಳಗಿ, ಆರ್.ಎಚ್. ಹಿತ್ತಲಮನಿ, ಎಸ್.ಎಸ್. ಮೇಟಿ, ಜಿ.ವಿ. ವಗ್ಗಣ್ಣವರ ಕಾರ್ಯಾಚರಣೆಯಲ್ಲಿ ಪಾಳ್ಗೊಂಡಿದ್ದರು.