ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ಟೋಬರ್ 28, 2021 ಕರ್ನಾಟಕದ ಜನರಿಗೆ ಕಾಳರಾತ್ರಿ. ಶಾಂತವಾಗಿದ್ದ ಸಮುದ್ರದಲ್ಲಿ ಭೋರ್ಗರೆವ ಅಲೆಗಳು ಒಮ್ಮೆಲೆ ದಡಕ್ಕೆ ಅಪ್ಪಳಿಸಿದಂತೆ ಪುನೀತ್ ರಾಜ್‌ಕುಮಾರ್ ಇನ್ನಿಲ್ಲ ಎಂಬ ಸುದ್ದಿ ಬರಸಿಡಿಲಿನಂತೆ ಹಬ್ಬಿತ್ತು. ಈ ಸುದ್ದಿ ನಿಜವಾಗದಿರಲಿ ಭಗವಂತ ಎಂದು ಪ್ರಾರ್ಥಿಸಿದ ಮನಸುಗಳೇ ಹೆಚ್ಚು. ಯಾವುದೇ ಪ್ರಾರ್ಥನೆ ಫಲಕೊಡಲಿಲ್ಲ, ಅಪ್ಪು ಹೋಗೇಬಿಟ್ರು ಎಂಬ ಕರ್ಕಶ ಶಬ್ಧ ರಾಜ್ಯಾದ್ಯಂತ ಸೂತಕದ ವಾತಾವರಣವನ್ನು ಉಂಟುಮಾಡಿತ್ತು. ಅವರಿಲ್ಲದೆ ಎರಡು ವರ್ಷ ಕಳೆದು ಹೋಗಿವೆ, ಇಂದಿಗೂ ಅಪ್ಪು ಅಮರ ಎಂಬ ಅಭಿಮಾನಿಗಳ ನಂಬಿಕೆ ಮಾತ್ರ ಕಳೆದಿಲ್ಲ. ನಮ್ಮೊಡನಿದ್ದಾರೆ ಎಂಬ ಭಾವದಲ್ಲೇ ಕರ್ನಾಟಕದ ಜನ ಇದ್ದಾರೆ.
ಇಂದು ಅವರ ಎರಡನೇ ಪುಣ್ಯಸ್ಮರಣೆಯಾಗಿದ್ದು, ಕಂಠೀರವ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ರಾಜ್ಯ, ದೇಶಾದ್ಯಂತ ಅಭಿಮಾನಿಗಳು ಇಂದು ಅಪ್ಪು ಸಮಾಧಿಯತ್ತ ಬರುತ್ತಿದ್ದಾರೆ. ಸ್ಟುಡಿಯೋ ಬಳಿ ಈಗಾಗಲೇ ಸಕಲವೂ ಸಿದ್ಧವಾಗಿದ್ದು, ನೂಕುನುಗ್ಗಲು ಉಂಟಾಗದಂತೆ ಭದ್ರತೆ ಕೂಡ ಹೆಚ್ಚಿಸಲಾಗಿದೆ.
ರಾಜ್ ಕುಟುಂಬದಿಂದ ಪೂಜೆ ನಡೆಯಲಿದೆ. ಪುನೀತ್ ಹೆಸರಲ್ಲಿ ಇಂದು ನಡೆಯುವ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಹೇಳಬೇಕಿಲ್ಲ. ಅನ್ನದಾನ, ರಕ್ತದಾನ, ಅಂಗಾಂಗದಾನ ಕಾರ್ಯಕ್ರಮಗಳು ನಡೆಯಲಿವೆ. ಹಲವು ದೇವಾಲಯಗಳಲ್ಲಿ ಅಪ್ಪು ಹೆಸರಲ್ಲಿ ಪೂಜೆಗಳು ನಡೆಯುತ್ತಿವೆ. ಜೀವಂತವಾಗಿ ಇರದಿದ್ದರೂ ಎಲ್ಲರ ಮನದಲ್ಲಿ ʻರಾಜʼನಾಗಿದ್ದಾನೆ ʻದೊಡ್ಮನೆ ಮಗʼ