ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದ ಬಳಿಕ ವಿಧಾನ ಪರಿಷತ್ ಸ್ಥಾನವನ್ನೂ ತ್ಯಜಿಸಿದ್ದಾರೆ.
ಫೇಸ್ಬುಕ್ ಲೈವ್‌ನಲ್ಲಿ ತನ್ನ ನಿರ್ಧಾರ ಪ್ರಕಟಿಸಿದ ಠಾಕ್ರೆ, ‘ನನ್ನನ್ನು ಬೆಂಬಲಿಸಿದ್ದಕ್ಕಾಗಿ ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಜನರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಶಿವಸೇನೆ ಕಡೆಯಿಂದ ಅನಿಲ್ ಪರಬ್, ಸುಭಾಷ್ ದೇಸಾಯಿ ಮತ್ತು ಆದಿತ್ಯ ಠಾಕ್ರೆ ಮಾತ್ರವೇ ಪ್ರಸ್ತಾಪವನ್ನು ಅಂಗೀಕರಿಸಿದಾಗ ಮಾತ್ರ ಹಾಜರಿದ್ದರು ಮತ್ತು ಎನ್‌ಸಿಪಿ ಮತ್ತು ಕಾಂಗ್ರೆಸ್ ಜನರು ಸಹ ಪ್ರಸ್ತಾಪವನ್ನು ಬೆಂಬಲಿಸಿದರು. ನಾನು ಅನಿರೀಕ್ಷಿತ ರೀತಿಯಲ್ಲಿ ಅಧಿಕಾರಕ್ಕೆ ಬಂದಿದ್ದೆ. ಈಗ ಅದೇ ರೀತಿಯಲ್ಲಿ ಹೊರಡುತ್ತಿದ್ದೇನೆ. ನಾನು ಶಾಶ್ವತವಾಗಿ ಹೋಗುವುದಿಲ್ಲ, ನಾನು ಇಲ್ಲೇ ಇರುತ್ತೇನೆ ಮತ್ತು ಮತ್ತೊಮ್ಮೆ ಶಿವಸೇನಾ ಭವನದಲ್ಲಿ ಕುಳಿತುಕೊಳ್ಳುತ್ತೇನೆ. ನನ್ನ ಎಲ್ಲಾ ಜನರನ್ನು ನಾನು ಒಟ್ಟುಗೂಡಿಸುವೆನು. ನಾನು ಸಿಎಂ ಮತ್ತು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪು ಸ್ವಾಗತಾರ್ಹ ಎಂದಿರುವ ಠಾಕ್ರೆ, ‘ಬಾಳಾ ಸಾಹೇಬ್ ಠಾಕ್ರೆ ಅವರ ಕನಸು ನನಸು ಮಾಡಿದ್ದೇನೆ. ಔರಂಗಾಬಾದ್ಗೆ ಸಂಭಾಜಿನಗರ ಎಂದು ಮರುನಾಮಕರಣ ಮಾಡಿದ್ದೇನೆ’ಎಂದರು. ಇದೇ ವೇಳೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಸೋನಿಯಾ ಗಾಂಧಿ ಅವರಿಗೆ ಧನ್ಯವಾದ ತಿಳಿಸಿದರು.
‘ರಿಕ್ಷಾವಾಲಾನನ್ನೂ ಸಚಿವನನ್ನಾಗಿ ಮಾಡಿರುವ ಹೆಮ್ಮೆ ನನಗಿದೆ. ಬರುವ ದಿನಗಳಲ್ಲಿ ಶಿವಸೇನೆ ಮತ್ತಷ್ಟು ಬಲಿಷ್ಠವಾಗಲಿದೆ. ಸದ್ಯ ನಮ್ಮವರೇ ನಮ್ಮನ್ನು ಕೈಬಿಟ್ಟರು’ಎಂದು ಶಿವಸೇನೆಯ ಬಂಡಾಯ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.
ಉದ್ಧವ್ ಠಾಕ್ರೆ ಈ ಘೋಷಣೆ ಮಾಡಿದ ಬೆನ್ನಲ್ಲಿಯೇ, ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ರಾಜೀನಾಮೆ ಪತ್ರವನ್ನು ಅಂಗೀಕಾರ ಮಾಡಿದ್ದಾರೆ. ಇದರಿಂದಾಗಿ ಗುರುವಾರ ನಡೆಯಬೇಕಿರುವ ಮಹಾರಾಷ್ಟ್ರ ವಿಧಾನಸಭೆಯ ವಿಶ್ವಾಸಮತ ಯಾಚನೆ ನಡೆಯುವುದಿಲ್ಲ.