ಹೊಸದಿಗಂತ ಮಂಗಳೂರು:
ಎಸ್ಸೆಸೆಲ್ಸಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಡೆದಿದೆ.
ಕಾಪು ಎಲ್ಲೂರು ಗ್ರಾಮದ ನಿವಾಸಿ ಅಜೀತ್ (17) ಆತ್ಮಹತ್ಯೆ ಮಾಡಿಕೊಂಡಾತ. ಪರೀಕ್ಷೆಯಲ್ಲಿ ಅನುತ್ತೀರ್ಣನಾದ ಹಿನ್ನೆಲೆಯಲ್ಲಿ ಈತ ಈ ಕೃತ್ಯ ನಡೆಸಿದ್ದಾನೆ ಎಂದು ಶಂಕಿಸಲಾಗಿದೆ.
ಮುದರಂಗಡಿ ಸರ್ಕಾರಿ ಕಿರಿಯ ಕಾಲೇಜು ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಅಜೀತ್, ಎಸ್ಸೆಸೆಲ್ಸಿ ಪರೀಕ್ಷೆಯ ಎರಡು ವಿಷಯದಲ್ಲಿ ಅನುತ್ತೀರ್ಣಗೊಂಡಿದ್ದ. ಬಳಿಕ ಏಪ್ರಿಲ್‌ನಲ್ಲಿ ಮತ್ತೆ ಪರೀಕ್ಷೆ ಬರೆದಿದ್ದು, ಅದರಲ್ಲೂ ಅನುತ್ತೀರ್ಣಗೊಂಡಿದ್ದ. ಕಳೆದ ನಾಲ್ಕು ತಿಂಗಳಿಂದ ಮಣಿಪಾಲದ ಅಜ್ಜಿ ಮನೆಯಲ್ಲಿ ವಾಸವಿದ್ದಾತ ಮನೆಯ ಸ್ನಾನದ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾನೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.