ಹೊಸದಿಗಂತ, ಮಂಗಳೂರು:
ಪುನರ್ವಸು ಆರ್ಭಟಕ್ಕೆ ಉಡುಪಿ ಜಿಲ್ಲೆ ಸೋಮವಾರ ಅಕ್ಷರಶಃ ನಲುಗಿ ಹೋಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಬೈಂದೂರು ತಾಲೂಕಿನಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜೊತೆಗೆ ಕುಂದಾಪುರ ತಾಲೂಕಿನ ಕೆಲವು ಆಯ್ದ ಪರಿಸರದ ಶಾಲೆಗಳಿಗೂ ರಜೆ ಘೋಷಿಸಲಾಗಿದೆ.
ಉಡುಪಿ ನಗರದಲ್ಲಿಯೂ ಆರ್ಭಟಿಸುತ್ತಿರುವ ಮಳೆಗೆ ತಗ್ಗುಪ್ರದೇಶಗಳು ಜಲಾವೃತಗೊಂಡು ಭಾರೀ ಸಂಕಷ್ಟ ಸೃಷ್ಟಿಸುತ್ತಿವೆ. ಮಳೆ ನೀರು ಎಲ್ಲೆಂದರಲ್ಲಿ ಹರಿದುಹೋಗಿ ವಾಹನ ಸಂಚಾರ, ಜನ ಸಂಚಾರಕ್ಕೂ ತೀವ್ರ ಅಡಚಣೆ ಉಂಟಾಗಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮುಂಜಾನೆಯಿಂದಲೇ ಮಳೆಯ ವಾತಾವರಣ ಕಂಡುಬಂದಿದ್ದು, ಕಲವೆಡೆ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ.
ನಗರದ ಕರಂಬಳ್ಳಿ ವೆಂಕಟರಾಮ ಬಡಾವಣೆ ಪರಿಸರದಲ್ಲಿ ಮಳೆ ನೀರು ನುಗ್ಗಿ ಒಂಭತ್ತು ಮನೆಗಳು ಸಂಕಷ್ಟದ ಸ್ಥಿತಿ ಎದುರಿಸುತ್ತಿವೆ. ಮಳೆಯ ತೀವ್ರತೆ ಹಾಗೂ ಆಯಾ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ತಮ್ಮ ವ್ಯಾಪ್ತಿಯಲ್ಲಿರುವ ಶಾಲೆಗಳಿಗೆ ರಜೆ ಘೋಷಿಸಲು ಜಿಲ್ಲಾಡಳಿತ ಬ್ಲಾಕ್ ಶಿಕ್ಷಣ ಅಧಿಕಾರಿಗಳಿಗೆ ಅಧಿಕಾರ ನೀಡಿದ್ದು, ಸ್ಥಳೀಯ ಸ್ಥಿತಿ ಆಧರಿಸಿ ಬಿಇಒಗಳು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಮಾಹಿತಿ ನೀಡಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿ ಯಾವುದೇ ಸಂಭಾವ್ಯ ಅನಾಹುತ ಘಟಿಸದಂತೆ ಕೂಡಾ ಜಿಲ್ಲಾಡಳಿತ ಕಟ್ಟುನಿಟ್ಟಿನ ಕಣ್ಗಾವಲು ಮುಂದುವರಿಸಿದೆ.
ಈ ನಡುವೆ ಕಡಲು ಕೂಡ ಪ್ರಕ್ಷುಬ್ಧಗೊಂಡಿದ್ದು, ಭಾರೀ ಅಲೆಗಳು ದಡಕ್ಕೆ ಅಪ್ಪಳಿಸಿ ಭಯ ಸೃಷ್ಟಿಸುತ್ತಿವೆ. ಪ್ರವಾಸಿಗರು, ನಾಗರಿಕರು ಕಡಲಿನ ಬಳಿಗೆ ತೆರಳದಂತೆ ಈಗಾಗಲೇ ಜಿಲ್ಲಾಡಳಿತ ಸೂಚನೆಯನ್ನು ನೀಡಿದೆ.