Thursday, July 7, 2022

Latest Posts

ಉಡುಪಿ ಕೃಷ್ಣ ಮಠ: ಭಾವೀ ಪರ್ಯಾಯ ಶ್ರೀಗಳಿಂದ ಪುರಪ್ರವೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್

ಉಡುಪಿ: ಈ ತಿಂಗಳ 18ರಂದು ಸರ್ವಜ್ಞ ಪೀಠವೇರಿ ನಾಲ್ಕನೇ ಬಾರಿಗೆ ದ್ವೈವಾರ್ಷಿಕ ಶ್ರೀಕೃಷ್ಣ ಪೂಜಾ ಕೈಂಕರ್ಯದ ಅಧಿಕಾರ ಸ್ವೀಕರಿಸಲಿರುವ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿ ಇಂದು ಪರ್ಯಾಯ ಪೂರ್ವ ತೀರ್ಥಾಟನೆ ಪೂರೈಸಿ ಉಡುಪಿ ಪುರಪ್ರವೇಶ ಮಾಡಿದರು.

ಯತಿಗಳನ್ನು ಗೌರವಾದರಪೂರ್ವಕವಾಗಿ ಸ್ವಾಗತಿಸಲಾಯಿತು. ಕೋವಿಡ್ ಕಾರಣದಿಂದಾಗಿ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಸೀಮಿತ ಭಕ್ತಾದಿಗಳ ಉಪಸ್ಥಿತಿಯಲ್ಲಿ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು. ದಂಡತೀರ್ಥ ಮಠದಿಂದ ನಗರದ ಜೋಡುಕಟ್ಟೆಗೆ ಆಗಮಿಸಿದ ಶ್ರೀವಿದ್ಯಾಸಾಗರತೀರ್ಥ ಸ್ವಾಮೀಜಿಯವರನ್ನು ತೆರೆದ ವಾಹನದಲ್ಲಿ ಕುಳ್ಳಿರಿಸಿ, ಮಠದ ಉಪಾಸ್ಯಮೂರ್ತಿ ಕಾಳೀಯಮರ್ದನ ಶ್ರೀನೃಸಿಂಹಸ್ವಾಮಿಯನ್ನು ಸ್ವರ್ಣ ಪಲ್ಲಕಿಯಲ್ಲಿರಿಸಿ ಮೆರವಣಿಗೆ ಮೂಲಕ ಕೃಷ್ಣಮಠಕ್ಕೆ ಬರಮಾಡಿಕೊಳ್ಳಲಾಯಿತು. ರಥಬೀದಿಗೆ ಆಗಮಿಸಿದ ಕೃಷ್ಣಾಪುರ ಶ್ರೀಗಳು ಕನಕನ ಕಿಂಡಿಯಲ್ಲಿ ಶ್ರೀಕೃಷ್ಣನನ್ನು ಕಂಡು ಚಂದ್ರೇಶ್ವರ ಮತ್ತು ಅನಂತೇಶ್ವರ ದೇವರನ್ನು ನಮಿಸಿ, ಮಧ್ವಾಚಾರ್ಯರಿಗೆ ಪೂಜೆ ಸಲ್ಲಿಸಿ, ಶ್ರೀಕೃಷ್ಣ ಮಠಕ್ಕೆ ಆಗಮಿಸಿದರು.

ಪರ್ಯಾಯ ಪೀಠಾಧೀಶ ಅದಮಾರು ಶ್ರೀಈಶಪ್ರಿಯತೀರ್ಥ ಸ್ವಾಮೀಜಿಯವರು ಭಾವೀ ಪರ್ಯಾಯ ಶ್ರೀಗಳನ್ನು ಬರಮಾಡಿಕೊಂಡು ಶ್ರೀಕೃಷ್ಣ ಮುಖ್ಯಪ್ರಾಣ, ಮಧ್ವರ ದರ್ಶನ ಮಾಡಿಸಿದರು. ನಂತರ ಕೃಷ್ಣಾಪುರ ಮಠದಲ್ಲಿ ನವಗ್ರಹ ದಾನಾದಿಗಳನ್ನು ನೀಡಿ ಸುಮುಹೂರ್ತದಲ್ಲಿ ಮಠ ಪ್ರವೇಶ ಮಾಡಿ, ಪಟ್ಟದ ದೇವರಿಗೆ ಮಂಗಳಾರತಿ ಮಾಡಿದರು.

ಭಾವೀ ಪರ್ಯಾಯ ಶ್ರೀಗಳಿಗೆ ಪೌರ ಸನ್ಮಾನ:
ಸಂಜೆ ರಥಬೀದಿಯಲ್ಲಿ ಪರ್ಯಾಯ ಮಹೋತ್ಸವ ಸಮಿತಿ ಮತ್ತು ಉಡುಪಿ ನಗರಸಭೆ ವತಿಯಿಂದ ಭಾವೀ ಪರ್ಯಾಯ ಶ್ರೀವಿದ್ಯಾಸಾಗರತೀರ್ಥರಿಗೆ ಪೌರ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಪರ್ಯಾಯ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಾಸಕ ರಘುಪತಿ ಭಟ್, ಗೌರವಾಧ್ಯಕ್ಷ ಕುಂಭಾಶಿ ಸೂರ್ಯನಾರಾಯಣ ಉಪಾಧ್ಯಾಯ, ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ ಪಾಡಿಗಾರು, ನಗರಸಭೆ ಸದಸ್ಯರು ಮೊದಲಾದವರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss