ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ಜಿಲ್ಲೆಯ ಮಲ್ಪೆಯ ನೇಜಾರಿನ ತೃಪ್ತಿ ನಗರದ ಮನೆಯಲ್ಲಿ ನಡೆದ ನಾಲ್ಕು ಕೊಲೆಯ ಪ್ರಕರಣಕ್ಕೆ ಸಂಬಂಧಿಸಿ, ಬಂಧಿತ ಆರೋಪಿ ಪ್ರವೀಣ್ ಅರುಣ್ ಚೌಗಲೆಯನ್ನು ಪೋಲಿಸರು ಗುರುವಾರ ಸಂಜೆ ಸ್ಥಳ ಮಹಜರಿಗಾಗಿ ಕೃತ್ಯ ನಡೆದ ಮನೆಗೆ ಕರೆ ತಂದಿದ್ದಾರೆ.
ಆರೋಪಿಯನ್ನು ಕರೆ ತರುತ್ತಿದ್ದಂತೆ, ಸಾರ್ವಜನಿಕರು ಆರೋಪಿ ಇದ್ದ ಪೊಲೀಸ್ ವಾಹನಕ್ಕೆ ನುಗ್ಗಲು ಯತ್ನಿಸಿದ್ದಾರೆ. ಜನಾಕ್ರೋಶದ ನಡುವೆ ಮಹಜರು ಪ್ರಕ್ರಿಯೆಯನ್ನು ಮುಗಿಸಿ, ಆರೋಪಿಯನ್ನು ವಾಪಾಸು ಕರೆದುಕೊಂಡು ಹೋದರು.
ಆರೋಪಿಯನ್ನು ನಮ್ಮ ಕೈಗೆ ಒಪ್ಪಿಸಿ ನಾವು ಶಿಕ್ಷೆ ಕೊಡುತ್ತೇವೆ, ಆತ 15 ನಿಮಿಷ ತೆಗೆದುಕೊಂಡಿದ್ದಾನೆ ನಮಗೆ 30 ಸೆಕೆಂಡು ಅವನನ್ನು ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಉಂಟಾಗಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಗುಂಪನ್ನು ಚದುರಿಸಿದ್ದಾರೆ.
ಈ ನಡುವೆ ರಸ್ತೆ ತಡೆ ನಡೆಸಿದ ಸಾರ್ವಜನಿಕರು, ಸ್ಥಳಕ್ಕೆ ಎಸ್ ಪಿ, ಡಿ ಸಿ ಬರಬೇಕು ಎಂದು ಆಗ್ರಹಿಸಿದರು. ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುತ್ತಿದ್ದ ಸಾರ್ವಜನಿಕರನ್ನು ಪೊಲೀಸರು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ, ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ.