ಹೊಸದಿಗಂತ ವರದಿ, ಚಿತ್ರದುರ್ಗ:
ಕಳೆದ ಬಾರಿ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಕಾಂತರಾಜ್ ಸಮಿತಿ ವರದಿ ಬಂದಿತ್ತು. ಆದರೆ ಆಗ ಅವರು ಅದನ್ನು ಅನುಷ್ಠಾನ ಮಾಡಿಲ್ಲ. ಇದು ಅರೆಬೆಂದ ವರದಿಯಾಗಿದ್ದು, ಅವರೇ ಹೇಳಿ ಮಾಡಿಸಿದ ವರದಿಯಾಗಿದೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದರು.
ನೂತನ ರಾಜ್ಯಾಧ್ಯಕ್ಷರಾಗಿ ಜವಬ್ದಾರಿ ವಹಿಸಿಕೊಂಡ ಬಳಿಕ ಗುರುವಾರ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಾಂತರಾಜ್ ವರದಿ ತಯಾರು ಮಾಡಲು ಕಾಂಗ್ರೆಸ್ ಸರ್ಕಾರದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ೧೫೦ ಕೋಟಿ ಹಣ ನೀಡಿದ್ದರು. ಮನಬಂದಂತೆ ವರದಿ ತಯಾರಿಸಲಾಗಿದೆ. ಆಯೋಗದವರು ಎಷ್ಟೋ ಮನೆಗಳಿಗೆ ಭೇಟಿ ನೀಡದೆ ಎ.ಸಿ.ರೂಂನಲ್ಲಿ ಕುಳಿತು ವರದಿ ತಯಾರಿಸಿದ್ದಾರೆ. ಈ ಸಮಯದಲ್ಲಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದರೂ ಏಕೆ ಅನುಷ್ಠಾನ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಕಳೆದ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಇದೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ವೀರಶೈವ ಲಿಂಗಾಯತ ನಡುವೆ ಬಿರುಕು ತಂದು ಬೆಂಕಿ ಹಚ್ಚುವ ಕೆಲಸ ಮಾಡಿ ಅದರಲ್ಲಿ ವಿಫಲರಾದರು. ಈಗ ಹೊಸ ರೂಪದಲ್ಲಿ ಸಮಾಜ ಒಡೆಯುವ ದುಸ್ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಬರುವಂತಹ ದಿನಗಳಲ್ಲಿ ಎಲ್ಲದಕ್ಕೂ ಜನರೇ ಉತ್ತರ ನೀಡುತ್ತಾರೆ ಎಂದು ವಿಜಯೇಂದ್ರ ತಿಳಿಸಿದರು.
ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದೆ. ನಮ್ಮ ಪಕ್ಷವನ್ನ ೪೦ ಪರ್ಸೆಂಟ್ ಸರ್ಕಾರ ಎಂದು ಟೀಕಿಸಿದ್ದರು. ಮತದಾರರೂ ಅದನ್ನು ನಂಬಿದರು. ಹೊಸ ಕಾಂಗ್ರೆಸ್ ಸರ್ಕಾರ ಬಂದು ೬ ತಿಂಗಳಾಗಿದೆ. ಹಗಲು ದರೋಡೆ, ಭ್ರಷ್ಟಾಚಾರ ಹೆಚ್ಚಾಗಿದ್ದು ಭ್ರಷ್ಟಾಚಾರದ ಅನುಷ್ಠಾನ ಕಾಂಗ್ರೆಸ್ ಸರ್ಕಾರದಿಂದ ಆಗುತ್ತಿದೆ ಎಂದು ಆಕ್ಷೇಪಿಸಿದರು.
ಲೋಕಸಭಾ ಚುನಾವಣೆಯಲ್ಲಿ ೨೮ಕ್ಕೆ ೨೮ ಕ್ಷೇತ್ರ ಗೆಲ್ಲುವ ಜೊತೆಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೂಡ ರಾಜ್ಯವನ್ನು ಬಿಜೆಪಿ ಭದ್ರಕೋಟೆಯಾಗಿ ಮಾಡಲು ಶ್ರಮಿಸುತ್ತೇನೆ. ಹಿರಿಯರ ಮಾರ್ಗದರ್ಶನದಲ್ಲಿ, ಸಂಘ ಪರಿವಾರದ ಮಾರ್ಗದರ್ಶನದಡಿ ಬಿಜೆಪಿಗೆ ಶಕ್ತಿ ತುಂಬುತ್ತೇನೆ. ಹಾಗೂ ಹಗಲು ರಾತ್ರಿ ಪ್ರವಾಸ ಮಾಡಿ, ರೈತರು, ಬಡವರ ಪರವಾಗಿ ಧ್ವನಿ ಎತ್ತುತ್ತೇನೆ. ಈಗಿನ ದುಷ್ಟ ಸರ್ಕಾರಕ್ಕೆ ಆ ಪಕ್ಷದ ಶಾಸಕರೇ ಪಾಠ ಕಲಿಸುತ್ತಾರೆ ಎಂದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ೨೮ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಿ ಹೊಸ ಇತಿಹಾಸ ಸೃಷ್ಠಿಸಬೇಕು ಎನ್ನುವುದು ನನ್ನ ಗುರಿಯಾಗಿದೆ. ಹಿಂದೆ ಯಡಿಯೂರಪ್ಪ ಅಧಿಕಾರ ಅವಧಿಯಲ್ಲಿ ೨೦ ಕ್ಷೇತ್ರ ಗೆದ್ದಿದ್ದೇವೆ. ನಾನು ಎಲ್ಲಾ ಕ್ಷೇತ್ರ ಗೆಲ್ಲಲು ಕಾರ್ಯೋನ್ಮುಖನಾಗಿ ಕೆಲಸ ಮಾಡುವೆ. ಜಿ.ಪಂ., ತಾ.ಪಂ. ಚುನಾವಣೆಗಳಲ್ಲೂ ಗೆಲ್ಲಬೇಕು. ಈ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ೪೦% ಸರ್ಕಾರ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದರು. ಆದರೆ ಇಂದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ೪೦% ಅನುಷ್ಠಾನ ಮಾಡುತ್ತಿದ್ದೆ. ವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಐಟಿ ದಾಳಿ ಕುರಿತು ಕಾಂಗ್ರೆಸ್ ನಾಯಕರು ಏನೂ ಹೇಳುತ್ತಿಲ್ಲ. ಐಟಿ ದಾಳಿಯಲ್ಲಿ ವಶ ಆದ ಹಣ ಕಾಂಗ್ರೆಸ್ ಪಕ್ಷದ್ದು ಎಂದು ರಾಜ್ಯದ ಜನ ಚರ್ಚೆ ಮಾಡುತ್ತಿದ್ದಾರೆ. ಸರ್ಕಾರ ಬಂದ ಬಳಿಕ ಒಂದೂ ಯೋಜನೆ ಜಾರಿಯಾಗಿಲ್ಲ. ಜನರ ಮೂಗಿಗೆ ಗ್ಯಾರಂಟಿ ಸ್ಕೀಮ್ ತುಪ್ಪ ಹಚ್ಚಿದ್ದಾರೆ ಎಂದು ಆರೋಪಿಸಿದರು.
ವರ್ಗಾವಣೆ ದಂಧೆಯಲ್ಲಿ ಕಾಂಗ್ರೇಸ್ ಸರ್ಕಾರ ಇದೆ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಗ ಯತೀಂದ್ರ ಸಾಬೀತು ಮಾಡಿದ್ದು, ಅವರ ವಿಡಿಯೋವನ್ನು ರಾಜ್ಯದ ಜನ ನೋಡುತ್ತಿದ್ದಾರೆ. ಐಟಿ ದಾಳಿಯಾದ ಬಳಿಕ ಮತ್ತೊಂದು ದಾಖಲೆ ಸಿಕ್ಕಿದ್ದೆ. ಇದಕ್ಕೆಲ್ಲಾ ರಾಜ್ಯದ ಜನ ಮುಂದೆ ತಕ್ಕ ಉತ್ತರ ನೀಡುತ್ತಾರೆ ಎಂದರು.
ನಾನು ರಾಜ್ಯಾಧ್ಯಕ್ಷ ಸ್ಥಾನ ಪಡೆಯಲು ಅನೇಕ ಹಿರಿಯ ನಾಯಕರು ಕೂಡ ಆಶೀರ್ವಾದ ಮಾಡಿದ್ದಾರೆ. ಯತ್ನಾಳ್ ಜೀ, ಸೋಮಣ್ಣ ಅವರ ಬಗ್ಗೆ ಗೌರವ ಇದೆ. ಬರುವ ದಿನಗಳಲ್ಲಿ ಎಲ್ಲರೂ ಕೂಡ ನಮ್ಮ ಜೊತೆ ಕೈಜೋಡಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿವಿಧ ಮಠಗಳಿಗೆ ಭೇಟಿ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಗುರುವಾರ ಮೊದಲ ಬಾರಿಗೆ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿ ನಾನಾ ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಯವರ ಆಶೀರ್ವಾದ ಪಡೆದರು.
ಚಿತ್ರದುರ್ಗ ಮುರುಘಾ ಮಠದ ಸ್ವಾಮೀಜಿಗಳ ಗದ್ದುಗೆಗೆ ನಮಿಸಿ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ಬಳಿಕ ಅಲ್ಲಿಂದ ಯಾದವಾನಂದ ಗುರುಪೀಠಕ್ಕೆ ಭೇಟಿ ನೀಡಿ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಬಳಿಕ ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿ ಅಲ್ಲಿನ ಅಲ್ಲಮಪ್ರಭು ದೇವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ಆನಂತರ ಶ್ರೀ ಭೋವಿ ಗುರುಪೀಠಕ್ಕೆ ಭೇಟಿ ನೀಡಿ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದರು.