ಉಡುಪಿ ಪೊಲೀಸರ ಕಾರ್ಯಾಚರಣೆ: ಅಂತರ್ ಜಿಲ್ಲಾ ಕಳ್ಳನ ಬಂಧನ

ಹೊಸದಿಗಂತ ವರದಿ,ಉಡುಪಿ:

ಉಡುಪಿ ನಗರದ ಮನೆಗಳಲ್ಲಿ ಚಿನ್ನಾಭರಣವನ್ನು ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳನನ್ನು ಉಡುಪಿ ನಗರ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ ಎಸ್.ಟಿ ತಿಳಿಸಿದ್ದಾರೆ.

ಅವರು ಬುಧವಾರ, ಉಡುಪಿ ನಗರ ಠಾಣೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿಯನ್ನು ವಿವರಿಸಿದರು.

ಬೆಂಗಳೂರಿನ ಉತ್ತರಹಳ್ಳಿಯ ಮಂಜುನಾಥ್ ಅಲಿಯಾಸ್ ಕಲ್ಕೆರೆ ಮಂಜ(43) ಬಂಧಿತ ಆರೋಪಿಯಾಗಿದ್ದಾನೆ. ಅ.31 ರಂದು ಉದ್ಯಾವರದ ಬಲಾಯಿಪಾದೆ ಜಂಕ್ಷನ್ ಬಳಿ ಈಕೊ ವಾಹನ ಸಹಿತ ಈತನನ್ನು ಬಂಧಿಸಲಾಗಿದೆ ಎಂದರು.

ಅ.9 ರಂದು ಉಡುಪಿಯ ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ಬಳಿಯ ಅಮ್ಮುಂಜೆ ವಿಠ್ಠಲದಾಸ್ ನಾಯಕ್ ಅವರ ಮನೆಯಲ್ಲಿದ್ದ 1,882 ಗ್ರಾಂ ತೂಕದ 66,36,300 ರೂ ಮೌಲ್ಯದ ಚಿನ್ನಾಭರಣ ಹಾಗು 7,450 ಗ್ರಾಂ ತೂಕದ 6,70,500 ರೂ ಮೌಲ್ಯದ ಬೆಳ್ಳಿಯ ಆಭರಣ ಸೇರಿದಂತೆ ಒಟ್ಟು 73,06,800 ರೂ.ಯ ಆಭರಣಗಳು ಕಳವಾದ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಬಂಧಿತ ಆರೋಪಿಯಿಂದ 31,55,930 ರೂ ಮೌಲ್ಯದ 530.909 ಚಿನ್ನಾಭರಣ, 15,12,000 ರೂ. ಮೌಲ್ಯದ 16.800 ಕೆ.ಜಿ ಬೆಳ್ಳಿಯ ಆಭರಣ ಹಾಗು ಕಳವು ಗೈದು ನಕಲಿ ನಂಬರ್ ಪ್ಲೇಟ್ ನೊಂದಿಗೆ ಬಳಸುತ್ತಿದ್ದ 2,50,000 ರೂ. ಯ ಈಕೋ ವಾಹನವನ್ನು ವಶಕ್ಕೆ ಪಡೆಯಲಾಗಿದ್ದು, ಈತನ ವಿರುದ್ದ ಬೆಂಗಳೂರು, ಕೋಲಾರ, ತುಮಕೂರು, ದಾವಣಗೆರೆ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 60 ಕ್ಕೂ ಪ್ರಕರಣ ದಾಖಲಾಗಿದೆ.

ಪ್ರಕರಣವನ್ನು ಭೇದಿಸಲು ಎಸ್ಪಿ ಡಾ. ಅರುಣ್ ಅವರ ಸೂಚನೆಯಂತೆ ಹೆಚ್ಚವರಿ ಎಸ್ಪಿ ಸಿದ್ದಲಿಂಗಪ್ಪ, ಉಡುಪಿ ಉಪವಿಭಾಗದ ಡಿವೈಎಸ್ಪಿ ದಿನಕರ್ ಮಾರ್ಗದರ್ಶನದಲ್ಲಿ ನಗರ ಠಾಣಾ ನಿರೀಕ್ಷಕ ಮಂಜಪ್ಪ.ಡಿ.ಆರ್, ನಗರ ಠಾಣೆಯ ಕಾನೂನು ಸುವ್ಯವಸ್ಥೆ ಪಿ.ಎಸ್.ಐ ಪುನೀತ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಉಡುಪಿ ನಗರ ಠಾಣೆಯ ಪಿ.ಎಸ್.ಐ ಈರಣ್ಣ ಶಿರಗುಂಪಿ, ಭರತೇಶ್ ಕಂಕಣವಾಡಿ ಹಾಗು ಸಿಬ್ಬಂದಿಗಳಾದ ಸತೀಶ್ ಬೆಳ್ಳೆ, ರಿಯಾಜ್ ಅಹ್ಮದ್, ವಿಶ್ವನಾಥ್ ಶೆಟ್ಟಿ, ಕಿರಣ್ ಕೆ, ಆನಂದ ಎಸ್, ಹೇಮಂತ್ ಕುಮಾರ್ ಎಮ್.ಆರ್, ಶಿವಕುಮಾರ್ ಎಚ್.ಎಮ್, ಎನ್ ಓಬಳೇಶ್ ಮತ್ತು ಜಸ್ವ ಯೋಹಾನಾ ಹಾಗು ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ದಿನೇಶ್ ಮತ್ತು ನಿತಿನ್ ಸಹಕರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!