ಹೊಸದಿಗಂತ ವರದಿ,ಕಾರವಾರ:
ಈ ಬಾರಿ ಲೋಕಸಭಾ ಚುನವಾಣೆಗೆ ಸ್ಪರ್ಧೆ ಮಾಡಲು ಆಕಾಂಕ್ಷಿಗಳ ಸಂಖ್ಯೆ ಜಾಸ್ತಿ ಇದೆ. ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರು ಕಣಕ್ಕಿಳದರೆ ಗೆಲುವು ನಿಶ್ಚಿತ. ಹಾಗಾಗಿ ನಾವು ಅವರನ್ನು ಕಣಕ್ಕಿಳಿಯುವಂತೆ ಆಹ್ವಾನಿಸುತ್ತಿದ್ದೇವೆ ಎಂದು ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.
ಅವರು ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ಲೋಕಸಭಾ ಚುನಾವಣೆಗೆ ತಮಗೆ ಟಿಕೇಟ ಕೊಡುವಂತೆ ಸಾಕಷ್ಟು ಹೆಸರುಗಳು ಜಿಲ್ಲೆಯಲ್ಲಿ ಕೇಳಿಬರುತ್ತಿದೆ. ನನ್ನ ಮಟ್ಟಿಗೆ ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರು ಜಿಲ್ಲೆಯ ಬಗ್ಗೆ ಚಿರಪರಿಚಿತರಾದವರು. ಜಿಲ್ಲೆಯ ಅಭಿವೃದ್ದಿ ಬಗ್ಗೆ ಅನುಭವಿರುವವರು, ಹಿರಿಯರು ಆಗಿದ್ದಾರೆ. ಅವರನ್ನೆ ಕಣಕ್ಕಿಳಿಯುವಂತೆ ನಾವು ಆಹ್ವಾನಿಸುತ್ತಿದ್ದೇವೆ. ನಮ್ಮೆಲ್ಲರ ಬೆಂಬಲ ಅವರಿಗಿದೆ ಎಂದರು.
ಮಾಜಿ ಸಚಿವ ಶಿವರಾಮ ಹೆಬ್ಬಾರ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಬಗ್ಗೆ ಕೇಳಲಾದ ಪ್ರಶ್ನೆಗೆ, ಹೆಬ್ಬಾರ ಅವರು ಕಾಂಗ್ರೆಸ್ ಬರುತ್ತೇನೆ ಎಂದು ಹೇಳಿಲ್ಲ. ನಮ್ಮವರು ಅವರನ್ನು ಆಹ್ವಾನಿಸಿಲ್ಲ. ಅವರಾಗಿಯೇ ಪಕ್ಷಕ್ಕೆ ಬರುತ್ತೇನೆ ಎಂದರೆ ನಾವು ಸ್ವಾಗತಿಸುತ್ತೇವೆ. ಇದರಿಂದ ಪಕ್ಷ ಬಲ ಹೆಚ್ಚಲಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯು ಉತ್ತಮವಾಗಿ ನಡೆದಿದೆ. ಹಾಲಿ ಅಧ್ಯಕ್ಷರು ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. ನಮ್ಮ ಕಾರ್ಯಕರ್ತರು ಕೂಡ ಅವರ ಜೊತೆ ಇದ್ದಾರೆ. ಆದರೆ ಸಿರಸಿ ಶಾಸಕ ಭೀಮಣ್ಣ ನಾಯ್ಕ ಅವರು ಪಕ್ಷ ಸಂಘಟನೆಯ ಬಗ್ಗೆ ಕೆಲ ದಿನಗಳ ಹಿಂದೆ ಅಂಕೋಲಾ ದಲ್ಲಿ ಮಾತನಾಡಿರುವದು ಯಾಕಾಗಿ ಎನ್ನುವದು ತಿಳಿದಿಲ್ಲ. ಪಕ್ಷ ಸಂಘಟನೆಯು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ನಮ್ಮ ಸರಕಾರವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗೆ ಹಣಕಾಸಿನ ಸಮಸ್ಯೆ ಇಲ್ಲದಾಗಿದೆ. ಕೆಲವರು ಅದನ್ನು ಅನಾವಶ್ಯಕವಾಗಿ ಸರಕಾರದ ಬಳಿ ಹಣ ಇಲ್ಲ ಹೇಳುತ್ತಿದ್ದಾರೆ. ನಾವು ನುಡಿದಂತೆ ನಡೆಯುತ್ತಿದ್ದೇವೆ. ಗ್ಯಾರಂಟಿ ಯೋಜನೆಗೆ ಮುಖ್ಯಮಂತ್ರಿಗಳು ೩.೫ ಲಕ್ಷ ಕೋ.ರೂ ಮೀಸಲಿರಿಸಿದ್ದಾರೆ. ಅನಾವಶ್ಯಕವಾಗಿ ಹೇಳುವವರು ಹೇಳುತ್ತಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುತ್ತಿದೆ.ಈ ಬಗ್ಗೆ ಜನರೇ ಹೇಳುತ್ತಿದ್ದಾರೆ ಎಂದು ಸಚಿವ ಮಂಕಾಳು ವೈದ್ಯ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಶಾಸಕ ಸತೀಶ ಸೈಲ್ ಹಾಗೂ ಇತರರು ಇದ್ದರು.