ಹೊಸದಿಗಂತ ವರದಿ, ಮಂಗಳೂರು:
ಉಡುಪಿಯ ಖಾಸಗಿ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆಯೊಂದು ಬಂದಿದ್ದು, ವಿದ್ಯಾರ್ಥಿಗಳು, ಪಾಲಕರು, ಸಿಬ್ಬಂದಿಗಳಲ್ಲಿ ಆತಂಕ ಸೃಷ್ಟಿಸಿದೆ.
ಶಾಲಾ ಇ-ಮೇಲ್ ಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಇದನ್ನು ಕಂಡ ಶಾಲೆಯ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಧಾವಿಸಿದ ಶ್ವಾನ ದಳ ಶಾಲೆಗೆ ಆಗಮಿಸಿ ತನಿಖೆ ನಡೆಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಶಾಲಾ ಪ್ರಾಂಶುಪಾಲರು “ಇಮೇಲ್ ಬಗ್ಗೆ ನಮಗೆ ತಿಳಿದ ತಕ್ಷಣವೇ ನಾವು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಮತ್ತು ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ನಮ್ಮಲ್ಲಿ ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದ್ದರಿಂದ ನಾವು ಯಾವಾಗಲೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತೇವೆ. ಭಯಪಡುವ ಅಗತ್ಯವಿಲ್ಲ, ಪೊಲೀಸ್ ಭದ್ರತೆಯೊಂದಿಗೆ ನಾವೂ ಸಹ ದೃಢವಾಗಿ ನಿಂತಿದ್ದೇವೆ ಎಂದರು.