ರಾಮಜನ್ಮಭೂಮಿಗೆ ಉಡುಪಿ ಶಿಲೆ – ನೀವು ತಿಳಿದಿರಬೇಕಾದ ವಿವರ ಇಲ್ಲಿದೆ

ಹೊಸದಿಗಂತ ವರದಿ ಬೆಂಗಳೂರು:

ಅಯೋಧ್ಯೆ ಜನ್ಮಭೂಮಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಗಾಗಿ ಶಿಲೆಯನ್ನು ಕಳುಹಿಸುವ ಸರದಿ ಎರಡನೇ ಬಾರಿ ಕರ್ನಾಟಕಕ್ಕೆ ಲಭಿಸಿದೆ. ಈ ಬಾರಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನೆಲ್ಲಿಕಾರಿನಿಂದ ಕೃಷ್ಣ ಶಿಲೆ ರಾಮನಗರಿ ಪ್ರಯಾಣ ಬೆಳೆಸಿದೆ. ಗುರುವಾರ ರಾತ್ರಿ ಕೃಷ್ಣಶಿಲೆಗೆ ವಿಶೇಷ ಪೂಜೆ ಸಲ್ಲಿಸಿ ಅಯೋಧ್ಯೆಗೆ ರವಾನಿಸಲಾಗಿದೆ.

ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಂಗಳ ಹಿಂದೆ ಕಾರ್ಕಳದ ವಿಶ್ವಹಿಂದು ಪರಿಷತ್‌ನ ಪ್ರಮುಖರನ್ನು ಸಂಪರ್ಕಿಸಿತ್ತು. ಬಳಿಕ ಅಯೋಧ್ಯೆಯಿಂದ ಶಿಲ್ಪಿ ಕುಶ್‌ದೀಪ್ ಬನ್ಸಾಲ್ ನೇತೃತ್ವದಲ್ಲಿ ಪರಿಣಿತ ತಜ್ಞರ ತಂಡವೊಂದು ನೆಲ್ಲಿಕಾರಿಗೆ ಆಗಮಿಸಿ, ಇಲ್ಲಿನ ಶಿಲೆಗಳನ್ನು ಪರಿಶೀಲನೆ ನಡೆಸಿತು. ಕಾರ್ಕಳದ ಈದು ಗ್ರಾಮದ ತುಂಗ ಪುಜಾರಿ ಅವರ ಜಮೀನಿನಲ್ಲಿದ್ದ ಶಿಲೆಯನ್ನು ಗುರುತಿಸಲಾಯಿತು.

9 ಟನ್ ತೂಕದ ಶಿಲೆ:
ಭೂಮಿಯೊಳಗಿದ್ದ ಶಿಲೆಯನ್ನು ಬಜಗೋಳಿ ಅಯ್ಯಪ್ಪ ಮಂದಿರಕ್ಕೆ ತಂದು ವಿಶ್ವ ಹಿಂದು ಪರಿಷತ್ ಮತ್ತು ಭಜರಂಗದಳದ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಶಿಲೆಯು 9 ಟನ್ ತೂಕ, 9.5 ಅಡಿ ಉದ್ದ, 6 ಅಡಿ ಅಗಲ ಮತ್ತು 4.5 ಅಡಿ ದಪ್ಪವಿದೆ. ಕಾರ್ಕಳದಿಂದ ಸುಮಾರು 2120 ಕಿ.ಮೀ. ದೂರದ ಅಯೋಧ್ಯೆಗೆ ಟ್ರಕ್ ಮೂಲಕ ಶಿಲೆಯನ್ನು ಕಳುಹಿಸಲಾಯಿತು.

ಈಗಾಗಲೇ ಮೈಸೂರು ಜಿಲ್ಲೆ ಹೆಗ್ಗಡೆದೇವನ ಕೋಟೆಯಿಂದ ಎರಡು ಶಿಲೆಗಳನ್ನು ಅಯೋಧ್ಯೆಗೆ ಕಳುಹಿಸಲಾಗಿದೆ. ನೇಪಾಳದ ಗಂಡಕೀ ನದಿಯಿಂದ ಎರಡು ಸಾಲಿಗ್ರಾಮ ಶಿಲೆಗಳು ಅಯೋಧ್ಯೆಗೆ ಬಂದಿವೆ. ರಾಜಸ್ಥಾನದಿಂದ ಮೂರು ಅಮೃತ ಶಿಲೆಗಳು ತಲುಪಿವೆ. ಇನ್ನೂ ಒಡಿಶಾ ಮತ್ತು ತಮಿಳುನಾಡಿನಿಂದ ಶಿಲೆಗಳು ಅಯೋಧ್ಯೆಗೆ ಬರಲಿವೆ. ಎಲ್ಲ ಶಿಲೆಗಳು ತಲುಪಿದ ನಂತರ ಪರಿಣಿತ ಶಿಲ್ಪಿಗಳು ಹಾಗೂ ತಜ್ಞರ ಸಮಿತಿ ಪರೀಕ್ಷೆ ನಡೆಸಿ ರಾಮಲಲ್ಲಾನಿಗಾಗಿ ಶಿಲೆಯ ಆಯ್ಕೆ ಮಾಡಲಿದೆ.

ತಿಂಗಳ ಹಿಂದೆ ವಿಶ್ವ ಹಿಂದು ಪರಿಷತ್‌ನ ಹಿರಿಯರು ಸಂಪರ್ಕಿಸಿ ಕಾರ್ಕಳದ ಕೃಷ್ಣ ಶಿಲೆಗಳ ಬಗ್ಗೆ ವಿಚಾರಿಸಿದ್ದರು. ಬಳಿಕ ಅಯೋಧ್ಯೆಯಿಂದ ಪರಿಣಿತರ ತಂಡ ಬಂದು ಪರಿಶೀಲಿಸಿತು. ಶಿಲೆಯನ್ನು ಗುರುತಿಸಿ, ಕಳುಹಿಸುವಂತೆ ಸೂಚಿಸಿತು. ರಾಮ ಜನ್ಮಭೂಮಿ ಮಂದಿರದಲ್ಲಿ ಪ್ರತಿಷ್ಠೆಯಾಗುವ ರಾಮನ ಬಿಂಬ ನಿರ್ಮಾಣಕ್ಕೆ ನಮ್ಮ ಕಾರ್ಕಳದ ಕಲ್ಲನ್ನೂ ಪರಿಗಣಿಸಿದ್ದು, ನಮಗೆ ಸಾರ್ಥಕತೆ ತಂದಿದೆ ಎಂದು ಭಜರಂಗದಳ ದಕ್ಷಿಣ ಪ್ರಾಂತ ಸಂಚಾಲಕ ಸುನೀಲ್ ಕೆ.ಆರ್. ಹೇಳಿದ್ದಾರೆ.

ಉಡುಪಿ ಕಾರ್ಕಳದ ಕೃಷ್ಣ ಶಿಲೆಯನ್ನೂ ರಾಮಲಲ್ಲಾನ ಮೂರ್ತಿ ನಿರ್ಮಾಣಕ್ಕಾಗಿ ತರಲಾಗುತ್ತಿದೆ. ಆದರೆ, ಇದೇ ಅಂತಿಮ ಆಯ್ಕೆಯಲ್ಲ. ಈಗಾಗಲೇ ನೇಪಾಳ, ರಾಜಸ್ಥಾನ ಮತ್ತು ಕರ್ನಾಟಕದ ಎಚ್.ಡಿ.ಕೋಟೆಯಿಂದ ಕಲ್ಲುಗಳು ಬಂದಿವೆ. ಎಲ್ಲ ಕಲ್ಲುಗಳು ಬಂದ ನಂತರ ಯಾವ ಶಿಲೆಯಿಂದ ಮೂರ್ತಿ ತಯಾರಿಸಲಾಗುತ್ತದೆ ಎಂಬುದು ಅಂತಿಮವಾಗಲಿದೆ ಎಂದು ಮಂದಿರ ನಿರ್ಮಾಣ ಉಸ್ತುವಾರಿ ಗೋಪಾಲ್ ಎಂ. ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!