ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ವಿಡಿಯೋ ವಿವಾದದಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಠಿಣ ಶಿಕ್ಷೆ ಆಗಬೇಕು. ಈ ವಿಚಾರವನ್ನು ಕೇಂದ್ರ ಗೃಹ ಸಚಿವರ ಗಮನಕ್ಕೂ ತಂದು ನ್ಯಾಯ ಕೊಡಿಸಲಾಗುವುದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಶುಕ್ರವಾರ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ. ರಾಜಕೀಯ ಮಾಡಲು ಸದ್ಯ ಯಾವುದೇ ಚುನಾವಣೆ ಇಲ್ಲ. ವಿದ್ಯಾರ್ಥಿನೀಯರ ಮಾನ ಪ್ರಾಣದ ಪ್ರಶ್ನೆಯಾಗಿದೆ. ಘಟನೆ ಸತ್ಯಾಸತ್ಯತೆ ಹೊರಗೆ ಬರಬೇಕು. ನನ್ನ ಕ್ಷೇತ್ರದ ವಿದ್ಯಾರ್ಥಿಗಳ ರಕ್ಷಣೆ ಆಗಬೇಕು. ಅವರಿಗೆ ನ್ಯಾಯ ಸಿಗಬೇಕು. ಕಾಲೇಜಿನ ಎಲ್ಲಾ ಸಿಸಿಟಿವಿ ದೃಶ್ಯ, ಮೊಬೈಲ್ಗಳನ್ನು ಎಫ್ಎಸ್ಎಲ್ಗೆ ಕಳುಹಿಸಬೇಕು.ಘಟನೆ ಬಗ್ಗೆ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅವರೊಂದಿಗೆ ಮಾತನಾಡಿದ್ದೇನೆ ಎಂದರು.
ನಮಗೆ ನಮ್ಮ ವಿದ್ಯಾರ್ಥಿನಿಯರ ರಕ್ಷಣೆ ಮುಖ್ಯ. ಲಂಚ್ ಬ್ರೇಕ್ ಟೈಮಲ್ಲಿ ಕೆಲವರು ಕಾಲೇಜ್ ಕ್ಯಾಂಪಸ್ ಗೆ ಬರುತ್ತಿದ್ದರು ಎಂದು ವಿದ್ಯಾರ್ಥಿನಿಯರು ಮಾಹಿತಿ ನೀಡಿದ್ದಾರೆ. ಘಟನೆಯ ತನಿಖೆ ಶೀಘ್ರ ಆಗಬೇಕು, ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದರು.
ಮಾಹಿತಿ ನೀಡಲು ಮನವಿ
ಇದೇ ವೇಳೆ ಯಾವುದೇ ಹಾಸ್ಟೆಲ್ ಕಾಲೇಜು ವಸತಿ ಶಾಲೆಯಲ್ಲಿ ಯಾರೇ ಹೀಗೆ ಮಾಡಿದರೂ ನನ್ನ ಗಮನಕ್ಕೆ ತರಬಹುದು. ಮಾಹಿತಿ ನೀಡಿದವರ ವಿವರ ಗೌಪ್ಯವಾಗಿ ಇಟ್ಟು ರಕ್ಷಣೆ ಮಾಡುತ್ತೇನೆ. ಲವ್ ಜಿಹಾದ್ ಮತ್ತು ಮತಾಂತರಕ್ಕೆ ಬಲಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ ಎಂದರು.