Monday, October 2, 2023

Latest Posts

ನಾಳೆ ಮಣಿಪುರಕ್ಕೆ INDIAದ 20 ಸಂಸದರ ನಿಯೋಗ ಭೇಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಣಿಪುರ ಹಿಂಸಾಚಾರ ಪೀಡಿತ ಪ್ರದೇಶಕ್ಕೆ ಪ್ರತಿಪಕ್ಷಗಳ ಮೈತ್ರಿಕೂಟ INDIAದ 20 ಸಂಸದರ ನಿಯೋಗ ಶನಿವಾರ ಭೇಟಿ ನೀಡಲಿದೆ.

ಜುಲೈ 29 ಮತ್ತು 30 ರಂದು 20 ಸಂಸದರ ನಿಯೋಗವು ಮಣಿಪುರಕ್ಕೆ ಭೇಟಿ ನೀಡಲಿದೆ ಎಂದು ವಿರೋಧ ಪಕ್ಷಗಳು ನಿರ್ಧರಿಸಿವೆ.

ಎರಡು ದಿನಗಳ ಕಾಲ ಅಲ್ಲಿನ ಪರಿಸ್ಥಿತಿಯನ್ನು ನೇರವಾಗಿ ಪರಿಶೀಲಿಸಿ, ರಾಜ್ಯದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಸಂಸತ್ತಿಗೆ ಶಿಫಾರಸುಗಳನ್ನು ಮಾಡಲಿದೆ.

ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಸಂಸದ ನಸೀರ್ ಹುಸೇನ್ ಅವರು, 16 ಪಕ್ಷಗಳ 20 ಸಂಸದರು ಮಣಿಪುರದ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದರು.

ಪ್ರತಿಪಕ್ಷಗಳ ನಿಯೋಗ ರಾಜ್ಯ ಭೇಟಿಗೆ ಅನುಮತಿ ನೀಡುವಂತೆ ಕೋರಿ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರಿಗೆ INDIA ಪತ್ರ ಬರೆದಿದ್ದು, ಅವರು ಅನುಮತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಿಯೋಗವು ಭಾನುವಾರ ಬೆಳಗ್ಗೆ ಮಣಿಪುರ ರಾಜ್ಯಪಾಲರಾದ ಅನುಸೂಯಾ ಉಯಿಕೆ ಅವರನ್ನು ಭೇಟಿ ಮಾಡಲಿದೆ ಎಂದು ಹುಸೇನ್ ಅವರು ತಿಳಿಸಿದ್ದಾರೆ.

ಪೀಡಿತ ಪ್ರದೇಶಗಳಿಗೆ ಹಾಗೂ ಪರಿಹಾರ ಶಿಬಿರಗಳಿಗೆ ಭೇಟಿ ನೀಡಲು ನಾವು ರಾಜ್ಯ ಸರ್ಕಾರದಿಂದ ಅನುಮತಿ ಪಡೆದಿದ್ದೇವೆ. ರಾಜ್ಯಪಾಲರನ್ನು ಭೇಟಿ ಮಾಡಲು ಸಹ ನಾವು ಅನುಮತಿ ಪಡೆದಿದ್ದೇವೆ ಎಂದು ಹುಸೇನ್ ಸುದ್ದಿಗಾರರಿಗೆ ಹೇಳಿದ್ದಾರೆ.

ಕಾಂಗ್ರೆಸ್ನ ಅಧೀರ್ ರಂಜನ್ ಚೌಧರಿ ಮತ್ತು ಗೌರವ್ ಗೊಗೊಯ್, ಟಿಎಂಸಿಯ ಸುಶ್ಮಿತಾ ದೇವ್, ಜೆಎಂಎಂನ ಮಹುವಾ ಮಜಿ, ಡಿಎಂಕೆಯ ಕನಿಮೊಳಿ, ಎನ್ಸಿಪಿಯ ಮೊಹಮ್ಮದ್ ಫೈಜಲ್, ಆರ್ಎಲ್ಡಿಯ ಜಯಂತ್ ಚೌಧರಿ, ಆರ್ಜೆಡಿಯ ಮನೋಜ್ ಕುಮಾರ್ ಝಾ, ಟಿಎಂಸಿಯ ಎನ್ ಕೆ ಪ್ರೇಮಚಂದ್ರನ್ ಮತ್ತು ಜೆಡಿಯು ಮುಖ್ಯಸ್ಥ ರಾಜೀವ್ ರಂಜನ್(ಲಾಲನ್) ಸಿಂಗ್ ಸೇರಿದಂತೆ ಪ್ರತಿಪಕ್ಷಗಳ 20 ಸಂಸದರು INDIA ನಿಯೋಗದಲ್ಲಿರಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!