ಹೊಸದಿಗಂತ ಡಿಜಿಟಲ್ ಡೆಸ್ಕ್
ಹಳೆಯದಾದ ಅಡುಗೆ ಮನೆಯನ್ನು ನವೀಕರಿಸುವ ವೇಳೆ ನೆಲದಡಿಯಲ್ಲಿ ಹೂತಿಟ್ಟಿದ್ದ ಬರೋಬ್ಬರಿ 2.3 ಕೋಟಿ ರೂಪಾಯಿ ಮೌಲ್ಯದ ಚಿನ್ನದ ನಾಣ್ಯಗಳು ಪತ್ತೆಯಾದ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ.
ಇಂಗ್ಲೆಂಡ್‌ನ ಉತ್ತರ ಯಾರ್ಕ್‍ಷೈರ್ ಪ್ರದೇಶದಲ್ಲಿ ವಾಸವಿರುವ ದಂಪತಿ ತಾವು ವಾಸವಿದ್ದ ಹಳೆಯ ಮನೆಯನ್ನು ನವೀಕರಿಸಲು ಮುಂದಾಗಿದ್ದರು. ಈ ವೇಳೆ ಅಡುಗೆ ಮನೆಯಲ್ಲಿಯ ನೆಲಮಾಳಿಗೆಯಲ್ಲಿ ನೆಲವನ್ನು ಅಗೆಯುತ್ತಿದ್ದಾಗ ಕೇವಲ ಆರು ಇಂಚುಗಳಷ್ಟು ಕೆಳಗೆ ಲೋಹದ ಡಬ್ಬಿಯೊಂದು ಪತ್ತೆಯಾಗಿದೆ. ದಂಪತಿಗಳು ಆರಂಭದಲ್ಲಿ ತಾವು ವಿದ್ಯುತ್ ಕೇಬಲ್‌ಗೆ ಹೊಡೆದಿದ್ದೇವೆ ಎಂದು ಭಾವಿಸಿದ್ದರು. ಕೂತೂಹಲದಿಂದ ನೆಲವನ್ನು ಶೋಧಿಸಿ ಸಣ್ಣ ಡಬ್ಬಿಯನ್ನು ಹೊರತೆಗೆದಾಗ ಅದರಲ್ಲಿ ನಂಬಲಾರದಷ್ಟು ಸಂಪತ್ತು ಪತ್ತೆಯಾಗಿದೆ.
ಆ ಡಬ್ಬಿಯಲ್ಲಿ ಬರೋಬ್ಬರಿ 264 ಚಿನ್ನದ ನಾಣ್ಯಗಳಿದ್ದವು. ಈ ಚಿನ್ನದ ನಾಣ್ಯಗಳು ಸಂಗ್ರಹವು 400 ವರ್ಷಗಳಿಗಿಂತಲೂ ಹಿಂದಿನವು. ಇವುಗಳನ್ನು ಇಂಗ್ಲೆಂಡ್ ನ ದೊರೆಗಳಾದ ಜೇಮ್ಸ್ I ಮತ್ತು ಚಾರ್ಲ್ಸ್ I ರ ಆಳ್ವಿಕೆಯಲ್ಲಿ 1610 ರಿಂದ 1727 ರ ಕಾಲಘಟ್ಟದಲ್ಲಿ ಬಳಸಲಾಗುತ್ತಿತ್ತು. ಪ್ರಭಾವಿ ವ್ಯಾಪಾರಿ ಕುಟುಂಬವೊಂದರ ಆಸ್ತಿಯಾಗಿದ್ದ ಈ ನಾಣ್ಯಗಳ ಸಂಪತ್ತನ್ನು ಗುಪ್ತವಾಗಿ ಅಡಗಿಸಿಡಲಾಗಿತ್ತು ಎಂದು ಹೇಳಲಾಗಿದೆ.
ಉತ್ತರ ಯಾರ್ಕ್‌ಷೈರ್ ದಂಪತಿಗಳು ಈ ಪ್ರಾಚೀನ ನಾಣ್ಯಗಳ ಹರಾಜಿಗೆ ಮುಂದಾಗಿದ್ದಾರೆ. ಈ ನಾಣ್ಯಗಳು 250,000 ಪೌಂಡ್ (2.3 ಕೋಟಿ ರು.) ಬೆಲೆಬಾಳುತ್ತವೆ ಎಂದು ಅಂದಾಜಿಸಲಾಗಿದೆ. ದಂಪತಿಗಳು ತಮ್ಮ ಗುರುತನ್ನು ಅನಾಮಧೇಯವಾಗಿ ಇಡಲು ಬಯಸಿದ್ದಾರೆ.