ಹೊಸದಿಗಂತ ಡಿಜಿಟಲ್ ಡೆಸ್ಕ್
ಬ್ರಿಟನ್ ಸರ್ಕಾರವು 12 ತಿಂಗಳ ಪ್ರಾಯೋಗಿಕ ಯೋಜನೆಯೊಂದನ್ನು ಪ್ರಾರಂಭಿಸಲಿದ್ದು, ದೇಶದಲ್ಲಿ ಆಶ್ರಯ ಪಡೆಯುವ ಅಕ್ರಮ ವಲಸಿಗರ ಕೈಗೆ ಎಲೆಕ್ಟ್ರಾನಿಕ್ ಟ್ಯಾಗ್ ಗಳನ್ನು ಹಾಕುವ ಮೂಲಕ ಅವರ ಚಲನವಲನಗಳ ಮೇಲೆ ನಿಗಾ ಇರಿಸಲಾಗುತ್ತದೆ.
ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಈ ಬಗ್ಗೆ ಪ್ರತಿಕ್ರಿಯಿಸಿ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸಣ್ಣ ಸಣ್ಣ ದೋಣಿಗಳಲ್ಲಿ ಹಾಗೂ ಲಾರಿಗಳಲ್ಲಿ ಅಡಗಿ ಅಪಾಯಕಾರಿ ಮಾರ್ಗಗಳ ದೇಶದೊಳಕ್ಕೆ ನುಸುಳುವ ಜನರು ಆ ಬಳಿಕ ʼತಲೆಮರೆಸಿಕೊಂಡು ಮಾಯವಾಗಲು” ಈ ಯೋಜನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ದೇಶದ ಗೃಹ ಸಚಿವಾಲಯವು ಈ ಯೋಜನೆ ಮೂಲಕ ವಲಸಿಗರ ದಾಖಲೆಗಳ ಮೇಲೆ ಕಣ್ಗಾವಲು ಇಡಲಿದೆ. ಆಶ್ರಯ ಪಡೆದವರು ಎಲ್ಲಿಗೆ ಪರಾರಿಯಾಗುತ್ತಾರೆ ಎಂಬುದರ ಕುರಿತು ಸರ್ಕಾರ ಡೇಟಾವನ್ನು ಪಡೆಯುತ್ತಿರುತ್ತದೆ.
“ಇಂಗ್ಲೆಂಡ್ ತುಂಬಾ ಉದಾರವಾದಿ ದೇಶವಾಗಿದೆ. ನನಗೆ ಅದರ ಬಗ್ಗೆ ಹೆಮ್ಮೆ ಇದೆ, ಆದರೆ ಜನರು ಅಕ್ರಮವಾಗಿ ಇಲ್ಲಿಗೆ ಬಂದಾಗ, ನಮ್ಮ ಕಾನೂನನ್ನು ಉಲ್ಲಂಘಿಸಿದಾಗ, ನಾವು ಆ ಬಗ್ಗೆ ಕ್ರಮಗಳನ್ನು ಕೈಗೊಳ್ಳುವುದು ಅಷ್ಟೆ ಅಗತ್ಯವಾಗಿದೆ ಎಂದು ಜಾನ್ಸನ್ ಹೇಳಿದ್ದಾರೆ.
“ನಾವು ನಮ್ಮ ರುವಾಂಡಾ(ಪೂರ್ವ ಆಫ್ರಿಕನ್ ರಾಷ್ಟ್ರಗಳ ವಲಸಿಗರ ಕುರಿತಾದ ನೀತಿ) ನೀತಿಯನ್ವಯ ಈ ಯೋಜನೆ ಜಾರಿಗೊಳಿಸುತ್ತಿದ್ದೇವೆ. ಆಶ್ರಯ ಪಡೆಯುವವರು ದೇಶದ ಉಳಿದ ಭಾಗಗಳಲ್ಲಿ ಕಣ್ಮರೆಯಾಗದಂತೆ ನೋಡಿಕೊಳ್ಳಲು ನಾವು ಇದನ್ನು ಜಾರಿಗೆ ತರುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ದೇಶದಲ್ಲಿ ಆಶ್ರಯ ಪಡೆದ ವಲಸಿಗರೊಂದಿಗೆ ನಿಯಮಿತ ಸಂಪರ್ಕವನ್ನು ಕಾಪಾಡಿಕೊಳ್ಳಲು ಹಾಗೂ ಅವರ ಹಕ್ಕುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮುಂದುವರಿಸಲು ವಲಸಿಗರಿಗೆ ಎಲೆಕ್ಟ್ರಾನಿಕ್ ಟ್ಯಾಗಿಗ್ ಪ್ರಯೋಗವನ್ನು ಗುರುವಾರದಿಂದಲೇ ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ಪ್ರಾರಂಭಿಸಲಾಗಿದೆ. ಎಷ್ಟು ಮಂದಿ ತಲೆಮರೆಸಿಕೊಂಡಿದ್ದಾರೆ ಮತ್ತು ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿಯನ್ನೂ ಇದು ಸಂಗ್ರಹಿಸಲಿದೆ.
ಈ ಯೋಜನೆಯನ್ವಯ ವಲಸಿಗರ ಕೈಗೆ ಟ್ಯಾಗ್ ಹಾಕಲಾಗುತ್ತದೆ. ನಿಯಮಗಳನ್ನು ಅನುಸರಿಸಲು ವಿಫಲರಾದವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬಹುದು. ಈ ಯೋಜನೆಯು ಮಕ್ಕಳು ಅಥವಾ ಗರ್ಭಿಣಿಯರನ್ನು ಒಳಗೊಂಡಿರುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸರ್ಕಾರ ಈ ಯೋಜನೆ ಪ್ರಕಟಿಸುತ್ತಿದ್ದಂತೆ ಆಂತರಿಕವಾಗಿ ತೀವ್ರ ವಿರೋಧ ಕೇಳಿಬಂದಿದೆ. ಇಂಗ್ಲೆಂಡ್ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಯೋಜನೆಯ ಕುರಿತಾಗಿ ಕಿಡಿಕಾರಿದ್ದು ʼಇದೊಂದು ಸಂಪೂರ್ಣ ಹಗರಣʼ ಮತ್ತು ʼಅಪಾರದರ್ಶಕ ಯೋಜನೆʼ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿರೋಧ ಪಕ್ಷದ ಲೇಬರ್ ನಾಯಕ ಕೀರ್ ಸ್ಟಾರ್ಮರ್ʼ ಸರ್ಕಾರವು ʼಪ್ರವಾಸಿಗರನ್ನು ಬೆನ್ನಟ್ಟುತ್ತಿದೆʼ ಎಂದು ಟೀಕಿಸಿದ್ದಾರೆ.
“ಯುದ್ಧ, ರಕ್ತಪಾತ ಮತ್ತು ಕಿರುಕುಳದಿಂದ ಓಡಿಹೋದ ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ಅಪರಾಧಿಗಳೆಂದು ಪರಿಗಣಿಸಲು ಇಂಗ್ಲೆಂಡ್ ಸರ್ಕಾರವು ಉದ್ದೇಶಿಸಿರುವುದು ಭಯಾನಕವಾಗಿದೆ” ಎಂದು ನಿರಾಶ್ರಿತರ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಎನ್ವರ್ ಸೊಲೊಮನ್ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ