ಸದ್ದಿಲ್ಲದೇ ರಷ್ಯಾವನ್ನು ಹಿಮ್ಮೆಟ್ಟಿಸುತ್ತಿದೆ ಉಕ್ರೇನ್: ಖಾರ್ಕಿವ್‌ ನಿಂದ ಪಡೆಗಳನ್ನು ಹಿಂತೆಗೆದುಕೊಳ್ಳುತ್ತಿದೆ ರಷ್ಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್‌ ನ ಪಡೆಗಳು ಸದ್ದಿಲ್ಲದೇ ರಷ್ಯಾ ಪಡೆಗಳನ್ನು ಹಿಮ್ಮೆಟ್ಟಿಸುತ್ತಿವೆ. ಈ ಬೆಳವಣಿಗೆಯು ಮಾರ್ಚ್‌ ನಲ್ಲಿ ಉಕ್ರೇನಿಯನ್‌ ಪಡೆಗಳು ರಾಜಧಾನಿಯಿಂದ ರಷ್ಯಾ ಪಡೆಗಳನ್ನು ಹಿಂದಿಕ್ಕಿದ ನಂತರ ಯುದ್ಧದ ಬದಲಾದ ಚಿತ್ರಣವನ್ನು ತೋರಿಸುತ್ತಿರುವಂತಿದೆ. ಪೂರ್ವ ಉಕ್ರೇನ್‌ ನಲ್ಲಿ ರಷ್ಯಾ ವಶಪಡಿಸಿಕೊಂಡ ಕೆಲ ಭಾಗಗಳನ್ನು ಉಕ್ರೇನ್‌ ಕೆಲವೇ ದಿನಗಳಲ್ಲಿ ಮರು ವಶಪಡಿಸಿಕೊಂಡಿದೆ.

ಸುದ್ದಿ ಸಂಸ್ಥೆ ರಾಯಿಟರ್ಸ್‌ ವರದಿ ಮಾಡಿರುವ ಪ್ರಕಾರ ಖಾರ್ಕಿವ್‌ನಿಂದ ಉತ್ತರಕ್ಕೆ ರಷ್ಯಾದ ಗಡಿಯಲ್ಲಿ ಉಕ್ರೇನಿಯನ್‌ ಪಡೆಗಳು 50 ಕಿಮೀ (30 ಮೈಲುಗಳು) ವರೆಗೆ ಮುಂದುವರೆದಿವೆ. ಅಲ್ಲದೇ ಅದೇ ಪ್ರದೇಶದಲ್ಲಿ ದಕ್ಷಿಣ ಮತ್ತು ಪೂರ್ವದಲ್ಲೂ ಕೂಡ ಉಕ್ರೇನಿಯನ್‌ ಪಡೆಗಳು ರಷ್ಯಾವನ್ನು ಹಿಂದಕ್ಕೊತ್ತುತ್ತಿವೆ ಎಂದು ಉಕ್ರೇನಿಯನ್ ಮುಖ್ಯ ಕಮಾಂಡರ್ ಜನರಲ್ ವಲೇರಿ ಜಲುಜ್ನಿ ಹೇಳಿದ್ದಾರೆ ಎನ್ನಲಾಗಿದೆ.

ಈ ತಿಂಗಳು ಉಕ್ರೇನ್ 3,000 ಚದರ ಕಿ.ಮೀ (1,160 ಚದರ ಮೈಲಿ) ಗಿಂತ ಹೆಚ್ಚಿನ ಪ್ರದೇಶವನ್ನು ವಶಪಡಿಸಿಕೊಂಡಿದೆ ಎಂದು ಜಲುಜ್ನಿ ಹೇಳಿದ್ದಾರೆ. ರಷ್ಯಾವು ಓಸ್ಕಿಲ್‌ ನದಿಯ ಪಶ್ಚಿಮದಲ್ಲಿ ಆಕ್ರಮಿಸಿಕೊಂಡಿರುವ ಖಾರ್ಕೀವ್‌ ಪ್ರದೇಶಗಳಿಂದ ತನ್ನ ಸೈನ್ಯವನ್ನು ಹಿಂತೆಗುಕೊಳ್ಳಲು ಸೂಚಿಸಿದೆ ಎಂದು ಬ್ರಿಟನ್‌ ರಕ್ಷಣಾ ಸಚಿವಾಲಯವು ಹೇಳಿದೆ.

ರಷ್ಯಾದ ರಕ್ಷಣಾ ಸಚಿವಾಲಯವು ಐಜಿಯಮ್ ನಗರದ ಸುತ್ತಮುತ್ತಲಿನ ಪ್ರದೇಶವನ್ನು ತೊರೆಯುವಂತೆ ಪಡೆಗಳಿಗೆ ಆದೇಶಿಸಿದೆ ಎಂದು ಟಾಸ್ ಶನಿವಾರ ತಿಳಿಸಿದೆ. ಅಲ್ಲದೇ ಈ ಭಾಗದ ರಷ್ಯಾ ಆಕ್ರಮಿತ ಪ್ರದೇಶದ ಜನತೆಗೆ ರಷ್ಯಾಗೆ ಸ್ಥಳಾಂತರಗೊಳ್ಳುವಂತೆ ರಷ್ಯಾದ ಮುಖ್ಯ ಕಾರ್ಯನಿರ್ವಾಹಕರು ಸೂಚಿಸಿದ್ದಾರೆ ಎಂದು ಅದು ಉಲ್ಲೇಖಿಸಿದೆ ಎಂದು ವರದಿ ತಿಳಿಸಿದೆ.

ಓಸ್ಕಿಲ್‌ ನದಿಯ ಪೂರ್ವದಲ್ಲಿ ರಷ್ಯಾದ ಈ ಹಿಮ್ಮೆಟ್ಟುವಿಕೆಯು 2014ರಲ್ಲಿ ರಷ್ಯಾವು ಆಕ್ರಮಿಸಿಕೊಂಡಿದ್ದ ಪ್ರದೇಶದ ಮೇಲೆ ಉಕ್ರೆನಿಯನ್‌ ಪಡೆಗಳು ಶೀಘ್ರದಲ್ಲೇ ಹಿಡಿತ ಸಾಧಿಸುವ ಸಾಧ್ಯತೆಗಳನ್ನು ತೆರೆದಿಟ್ಟಿದೆ ಎನ್ನಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!