- ಚೈತನ್ಯ ಹೆಗಡೆ
ಭಾರತವು ರಷ್ಯದಿಂದ ತೈಲ ತರಿಸಿಕೊಳ್ಳುತ್ತಿರುವುದರ ಕುರಿತ ಆಕ್ಷೇಪಗಳಿಗೆ ವಿದೇಶ ಮಂತ್ರಿ ಎಸ್ ಜೈಶಂಕರ್ ಪ್ರತಿಬಾರಿ ಉತ್ತರಿಸಿದಾಗಲೂ ಅವರ ಮಾತುಗಳು ವೈರಲ್ ಆಗುತ್ತವೆ. ತುಂಬ ಖಚಿತ ಹಾಗೂ ತಾರ್ಕಿಕವಾಗಿ ಭಾರತದ ನಿಲುವನ್ನು ಜಗತ್ತಿನೆದರು, ಅವರಿಗೆ ಅರ್ಥವಾಗುವ ಭಾಷೆಯಲ್ಲೇ ಇಟ್ಟವರು ಜೈಶಂಕರ್.
ಅವರು ಹಲವು ವೇದಿಕೆಗಳಲ್ಲಿ ಹೇಳಿರುವ ಮಾತಿನ ಸಾರವಿಷ್ಟು- “ನನ್ನ ದೇಶದ ನಾಗರಿಕನ ಹಿತ ಕಾಪಾಡುವುದಷ್ಟೇ ನಮ್ಮ ಸರ್ಕಾರದ ಗುರಿ. ಇಷ್ಟಕ್ಕೂ ರಷ್ಯದಿಂದ ತೈಲವನ್ನೇಕೆ ತರಿಸಿಕೊಳ್ಳುತ್ತಿದ್ದೀರಿ ಎನ್ನುವವರು ವೆನಿಜುವೆಲದಿಂದ, ಇರಾನಿನಿಂದ ಬರುತ್ತಿದ್ದ ತೈಲವನ್ನೂ ತಡೆದಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಎಲ್ಲಿ ಕಡಿಮೆ ಬೆಲೆಗೆ ಸಿಗುತ್ತದೆಯೋ ಅಲ್ಲಿಂದ ಭಾರತ ತೈಲ ತೆಗೆದುಕೊಳ್ಳುತ್ತದೆ.”
ಜೈಶಂಕರ್ ಅವರ ಮಾತುಗಳನ್ನು ಮತ್ತೆ ನೆನಪಿಸಿಕೊಳ್ಳುತ್ತಿರುವುದೇಕೆ ಎಂದರೆ ಇದೀಗ ಜಗತ್ತು, ವಿಶೇಷವಾಗಿ ಯುರೋಪಿಯನ್ ದೇಶಗಳು, ಹೇಗೆ ತಮ್ಮ ಲಾಭಕ್ಕೆ ತಕ್ಕಂತೆ ನಿಲುವು ಬದಲಿಸಿಕೊಳ್ಳುತ್ತಿವೆ ಎಂಬುದನ್ನು ಗಮನಿಸಿದಾಗ ರಷ್ಯ-ಉಕ್ರೇನ್ ಸಂಬಂಧ ಭಾರತ ಪ್ರಾರಂಭದಿಂದಲೇ ತೆಗೆದುಕೊಂಡ ನಿಲುವಿನ ಬಗ್ಗೆ ಮತ್ತಷ್ಟು ಅಭಿಮಾನ ಮೂಡುತ್ತದೆ.
ಈಗಾಗಿರುವುದೇನು ಗೊತ್ತೇ? ತಿಂಗಳುಗಳೇ ಕಳೆದರೂ ರಷ್ಯ-ಉಕ್ರೇನ್ ಯುದ್ಧದಲ್ಲಿ ತಾರ್ಕಿಕವಾಗಿ ಗೆಲುವು ಮತ್ತು ಸೋಲು ನಿರ್ಣಯವಾಗಿಲ್ಲ. ಯುದ್ಧ ಆರಂಭವಾದಾಗ ಪಾಶ್ಚಾತ್ಯ ಮಾಧ್ಯಮ ಮಾಡಿದ ಪ್ರಚಾರಾಂದೋಲನ ನೆನಪಿಸಿಕೊಂಡರೆ ಅದು ಹೀಗಿತ್ತು- ಉಕ್ರೇನ್ ರಾಜಧಾನಿ ಕೀವ್ ಅನ್ನು ವಶಪಡಿಸಿಕೊಳ್ಳುವುದು ವಿಳಂಬವಾದಷ್ಟೂ ಯುದ್ಧ ಮುಂದುವರಿದು, ಆರ್ಥಿಕ ನಿರ್ಬಂಧದ ಭಾರಕ್ಕೆ ರಷ್ಯ ಕುಸಿದುಹೋಗುತ್ತದೆ ಎಂಬುದು ಎಲ್ಲರ ವಾದವಾಗಿತ್ತು. ಆದರೆ, ರಷ್ಯವು ಉಕ್ರೇನ್ ಅನ್ನು ವಶಪಡಿಸಿಕೊಂಡಿಲ್ಲ ಎಂಬುದು ನಿಜವಾದರೂ (ಅದು ರಷ್ಯದ ಪ್ಲಾನೇ ಆಗಿರಲಿಕ್ಕಿಲ್ಲ, ಯಾರಿಗೆ ಗೊತ್ತು!) ಪಾಶ್ಚಾತ್ಯರು ಹೇಳಿದಂತೆ ರಷ್ಯನ್ನರ ಆರ್ಥಿಕ ವ್ಯವಸ್ಥೆ ಪಾತಾಳಕ್ಕೇನೂ ಬಿದ್ದಿಲ್ಲ. ಬಹಳ ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ ಯುರೋಪಿನ ಹಲವು ದೇಶಗಳೇ ಸುತ್ತು-ಬಳಸಿ ರಷ್ಯದ ತೈಲ ತರಿಸಿಕೊಳ್ಳುತ್ತಿವೆ!
ಹಾಗಾದರೆ, ಇವೆಲ್ಲ ಏಕೆ ವ್ಯಾಪಕವಾಗಿ ವರದಿ ಆಗುತ್ತಿಲ್ಲ? ಕಾರಣ ಗೊತ್ತಿರುವಂಥದ್ದೇ. ಜಗತ್ತಿನ ಮಾಧ್ಯಮ ಸಾಮ್ರಾಜ್ಯ ಇರುವುದು ಪಾಶ್ಚಾತ್ಯ ಶಕ್ತಿಗಳ ಕೈಯಲ್ಲಿ. ಅಲ್ಲದೇ, ಚೀನಾವು ಹೇಗೆ ಜಗತ್ತಿಗೆ ತನ್ನ ಬಗ್ಗೆ ತಮಟೆ ಹೊಡೆದು ಹೇಳಿಕೊಳ್ಳುವಂತಹ ತನ್ನ ನೆಲದ ಮಾಧ್ಯಮ ಲೋಕವನ್ನು ಸೃಷ್ಟಿಸಿಕೊಂಡಿದೆಯೋ ಅಂಥದೊಂದು ವ್ಯವಸ್ಥೆ ರಷ್ಯದ ಬಳಿ ಇಲ್ಲ. ಹೀಗಾಗಿ ‘ಮೊದಲಿಗೆ ರೆಪ್ಪೆ ಬಡಿಯೋರಾರು’ ಎಂಬ ಪುಟಿನ್ ಮತ್ತು ಪಾಶ್ಚಾತ್ಯರ ನಡುವಿನ ಜಿದ್ದಿನಲ್ಲಿ ಪಾಶ್ಚಾತ್ಯರ ಕಣ್ಣುಗಳೇ ಅದುರುತ್ತಿರುವುದು ದೊಡ್ಡಮಟ್ಟದಲ್ಲಿ ವರದಿ ಆಗುತ್ತಿಲ್ಲ. ಅಷ್ಟಾಗಿಯೂ, ಇವೇ ಪಾಶ್ಚಾತ್ಯರ ಮಾಧ್ಯಮಗಳಲ್ಲೇ ಪ್ರಕಟವಾಗುತ್ತಿರುವ ಚಿಕ್ಕಪುಟ್ಟ ವರದಿಗಳನ್ನು ಜೋಡಿಸಿ ನೋಡಿದರೆ ನಮಗೆ ಸಿಗುವ ವಾಸ್ತವ ಕೆಳಗಿನಂತಿದೆ.
- ಏಷ್ಯದ ಪ್ರಮುಖ ದೇಶ ಹಾಗೂ ಅಮೆರಿಕದ ಮುಖ್ಯ ಮೈತ್ರಿ ಜಪಾನ್ ತಾನು ರಷ್ಯ ಇಂಧನವನ್ನು ಪುನಃ ಆಮದಾಗಿಸಿಕೊಳ್ಳುವ ನಿರ್ಧಾರ ತೆಗೆದುಕೊಳ್ಳದೇ ಬೇರೆ ದಾರಿ ಇಲ್ಲ ಎಂಬುದನ್ನು ಒಂದೆರಡು ದಿನಗಳ ಹಿಂದೆ ಸ್ಪಷ್ಟಪಡಿಸಿದೆ. ಭವಿಷ್ಯದಲ್ಲಿ ರಷ್ಯದ ಅವಲಂಬನೆ ತಪ್ಪಿಸುವ ಪ್ರಯತ್ನ ಮಾಡುತ್ತೇವೆ ಎಂಬ ತಿಪ್ಪೆ ಸಾರುವ ಮಾತು ಜತೆಯಾಗಿದೆ.
- ಯಾವ ಜರ್ಮನಿಯು ಸಂಘರ್ಷದ ಪ್ರಾರಂಭದಲ್ಲಿ ರಷ್ಯ ಗ್ಯಾಸ್ ಹರಿದು ಬರಲು ಸಿದ್ಧವಾಗಿದ್ದ ನಾರ್ಡ್ ಸ್ಟ್ರೀಮ್ 2 ಎಂಬ ಹೆಚ್ಚುವರಿ ಪೈಪ್ಲೈನ್ ಅನ್ನು ಪ್ರಾರಂಭಿಸುವುದಕ್ಕೆ ನಿರಾಕರಿಸಿತ್ತೋ ಅದೇ ಈಗ ರಾಗ ಬದಲಿಸಿದೆ. ಯುರೋಪಿನ ಜನ ಚಳಿಗಾಲದಲ್ಲಿ ಶೀತದಿಂದ ಹೆಪ್ಪುಗಟ್ಟಬಾರದು ಎಂದಾದರೆ ರಷ್ಯ ಗ್ಯಾಸ್ ತರಿಸಿಕೊಳ್ಳುವ ಆ ಎರಡನೇ ಪೈಪ್ಲೈನ್ ನಲ್ಲಿ ಅನಿಲ ಪ್ರವಹಿಸುವುದಕ್ಕೆ ಶುರುವಾಗಬೇಕು ಅಂತ ಜರ್ಮನಿಯ ಉಪಾಧ್ಯಕ್ಷ ಹೇಳಿಕೆ ಕೊಟ್ಟಿದ್ದಾರೆ.
- ಯುರೋಪಿಯನ್ ದೇಶಗಳು ಸಂಘರ್ಷದ ಪ್ರಾರಂಭದಲ್ಲಿ ಹೇಳಿದ್ದೇನೆಂದರೆ, 2022ರ ಡಿಸೆಂಬರ್ ವೇಳೆಗೆ ರಷ್ಯ ಮೇಲೆ ಸಂಪೂರ್ಣ ನಿರ್ಬಂಧ ಲಾಗೂ ಮಾಡುತ್ತೇವೆ ಅಂತ. ಹಾಗೆ ಹೇಳಿಕೆ ಕೊಡುವಾಗ, ಕೆಲವು ತಿಂಗಳುಗಳ ಕಾಲ ಉಕ್ರೇನ್ ಸೋಲದಂತೆ ನೋಡಿಕೊಂಡರೆ ರಷ್ಯವೇ ಸಂಧಾನಕ್ಕೆ ಬಂದುಬಿಡುತ್ತದೆ ಎಂಬ ಲೆಕ್ಕಾಚಾರ ಇವರಲ್ಲಿದ್ದದ್ದು ಸ್ಪಷ್ಟ. ಆದರೆ ಯಾವಾಗ ಪುಟಿನ್ ಈ ಮನೋಭೂಮಿಕೆಯ ದೃಷ್ಟಿಯುದ್ಧದಲ್ಲಿ ‘ರೆಪ್ಪೆ ಬಡಿಯಲಿಲ್ಲವೋ’ ಆಗ ಯುರೋಪಿನ ದೇಶಗಳಿಗೆ ವಾಸ್ತವ ಇರಿಯುತ್ತಿದೆ. ಬಿಸಿನೆಸ್ ಇನ್ಸೈಡರ್ ವರದಿ ಪ್ರಕಾರ ಆಗಸ್ಟಿನಲ್ಲಿ ಇಟಲಿ ಮತ್ತು ಸ್ಪೇನ್ ರಷ್ಯದಿಂದ ದೊಡ್ಡಮಟ್ಟದಲ್ಲಿ ಗ್ಯಾಸ್ ತರಿಸಿಕೊಂಡಿವೆ.
- ಪಾಶ್ಚಾತ್ಯರ ಆರ್ಥಿಕ ನಿರ್ಬಂಧವು ರಷ್ಯದ ಮೇಲೆ ತೀವ್ರ ಪರಿಣಾಮವನ್ನೇನೂ ಬೀರಿಲ್ಲ, ಏಕೆಂದರೆ ಏಷ್ಯದ ದೇಶಗಳು ಸ್ಪರ್ಧಾತ್ಮಕ ದರದಲ್ಲಿ ರಷ್ಯದಿಂದ ತೈಲ ಪಡೆಯುತ್ತಿವೆ ಎಂದು ಅಂತಾರಾಷ್ಟ್ರೀಯ ಎನರ್ಜಿ ಏಜೆನ್ಸಿ ಹೇಳಿದೆ.
- ಮಾಸ್ಕೊ ಟೈಮ್ಸ್ ವರದಿ ಸಾರುತ್ತಿರುವ ಪ್ರಕಾರ ಯುರೋಪಿಯನ್ ದೇಶಗಳಿಗೆ ರಷ್ಯದಿಂದ ಹೋಗುತ್ತಿದ್ದ ಪದಾರ್ಥಗಳ ಪ್ರಮಾಣದಲ್ಲಿ ಇಳಿಕೆ ಕಂಡುಬಂದರೂ ಹಣದ ಪ್ರಮಾಣದಲ್ಲಿ ಹೆಚ್ಚಿಗೆಯಾಗಿದೆ. ಏಕೆಂದರೆ ಪಾಶ್ಚಾತ್ಯ ದೇಶಗಳಲ್ಲಿ ಹಣದುಬ್ಬರ!
- ರಷ್ಯ ವಿರುದ್ಧ ಮುಂಚೂಣಿಯಲ್ಲಿ ನಿಂತು ಗುಟುರುಹಾಕಿದ್ದ ಇಂಗ್ಲೆಂಡಿನಲ್ಲಿ ನಲ್ವತ್ತು ವರ್ಷಗಳಲ್ಲೇ ಅತಿಹೆಚ್ಚಿನ- 10.1%- ಹಣದುಬ್ಬರ ಜುಲೈನಲ್ಲಿ ವರದಿಯಾಗಿತ್ತು. ಇದಕ್ಕೆ ಮುಖ್ಯ ಕಾರಣಗಳಲ್ಲೊಂದು ಹೆಚ್ಚುತ್ತಿರುವ ಎನರ್ಜಿ ಪಾವತಿ.
ಇವೆಲ್ಲದರ ಅರ್ಥ ಈ ಸಮರವನ್ನು ರಷ್ಯ ಗೆದ್ದುಬಿಟ್ಟಿತು ಅಂತಲ್ಲ. ಆದರೆ ಪಾಶ್ಚಾತ್ಯರು ಗೆಲ್ಲಲಾರರು, ಅವರ ಗೆಲುವೇನಿದ್ದರೂ ಪ್ರಚಾರಾಂದೋಲನದಲ್ಲಿ ಎಂಬುದು ನಿಚ್ಚಳವಾಗಿದೆ. ಹೀಗಾಗಿಯೇ ಪ್ರಾರಂಭದಿಂದಲೇ, ತನ್ನದಲ್ಲದ ಯುದ್ಧದಲ್ಲಿ ತಾನು ಯಾರೊಂದಿಗೂ ಸಂಘರ್ಷ ನಡೆಸಲಾರೆ ಎಂಬಂತೆ ದೂರ ಉಳಿದ ಭಾರತದ ನೀತಿ ಸ್ಪಷ್ಟವಾಗಿ ಗೆದ್ದಿದೆ!