ನಿಲ್ಲದ ವರುಣಾರ್ಭಟ: ಕಾಳಿ ನದಿಯಲ್ಲಿ ಪ್ರವಾಹ ಮುನ್ಸೂಚನೆ

ಹೊಸದಿಗಂತ ವರದಿ ಕಾರವಾರ :

ಕಾಳಿ ನದಿ ಜಲ ವಿದ್ಯುತ್‌ ಹಂತ- ಯೋಜನೆಯ ಅಪ್ಪ‌ರ್ ಕಾನೇರಿ ಆಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು , ಕರ್ನಾಟಕ ವಿದ್ಯುತ್ ನಿಗಮ ಪ್ರವಾಹ ಮುನ್ಸೂಚನೆ ಹೊರಡಿಸಿದೆ.

ವಿಪರೀತ ಮಳೆಯಿಂದ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು , ಇದರಿಂದಾಗಿ ಅಪ್ಪ‌ರ್ ಕಾನೇರಿ ಆಣೆಕಟ್ಟೆಯ ಜಲಾಶಯದ ನೀರಿನ ಮಟ್ಟವು ಸತತವಾಗಿ ಏರುತ್ತಲಿದೆ . ಅಪ್ಪ‌ರ್ ಕಾನೇರಿ ಜಲಾಶಯದ ಗರಿಷ್ಟ ಮಟ್ಟವು 615.50 ಮೀಟರ್‌ಗಳಿರುತ್ತದೆ . ಈಗಿನ ಜಲಾಶಯದ ಮಟ್ಟವು ಜೂ. 4 ರಂದು ಬೆಳಿಗ್ಗೆ 8 ಗಂಟೆಗೆ 605.85 ಮೀಟರ್ ಆಗಿದೆ. ಇದೇ ರೀತಿಯಲ್ಲಿ ಜಲಾಶಯಕ್ಕೆ ನೀರಿನ ಒಳಹರಿವು ಮುಂದುವರೆದಲ್ಲಿ ಕಡಿಮೆ ಜಲಸಂಗ್ರಹಣ ಸಾಮರ್ಥ್ಯವುಳ್ಳ ಅಪ್ಪ‌ರ್ ಕಾನೇರಿ ಜಲಾಶಯದ ಗರಿಷ್ಠ ಮಟ್ಟವು ಶೀಘ್ರದಲ್ಲಿಯೇ ತುಂಬುವ ಸಾಧ್ಯತೆ ಇರುತ್ತದೆ . ಆದ್ದರಿಂದ ಆಣೆಕಟ್ಟು ಸುರಕ್ಷತೆಗಾಗಿ ಹೆಚ್ಚುವರಿಯಾದ ಜಲಾಶಯದ ನೀರನ್ನು ಯಾವುದೇ ಸಮಯದಲ್ಲಿ ಹೊರಬಿಡುವ ಸಂದರ್ಭ ಬರಬಹುದು .

ಆಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ದಂಡೆಯ ಪಾತ್ರದಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ , ಜಾನುವಾರು ವಗೈರೆಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿಕೊಳ್ಳಬೇಕೆಂದು ಈ ಮೂಲಕ ಎಚ್ಚರಿಸಲಾಗಿದೆ ಹಾಗೂ ಆಣೆಕಟ್ಟೆಯ ಕೆಳಭಾಗದ ನದಿಯ ಪಾತ್ರದಲ್ಲಿ ದೋಣಿ ಸಂಚಾರ , ಮೀನುಗಾರಿಕೆ ಮತ್ತು ಇತರೆ ಚಟುವಟಿಕೆಗಳನ್ನು ಮಳೆಗಾಲದ ಅವಧಿಯಲ್ಲಿ ನಡೆಸದಂತೆ ಕರ್ನಾಟಕ ವಿದ್ಯುತ್ ನಿಗಮ ಪ್ರಕಟಣೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!