ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ನೀಟ್ ಪರೀಕ್ಷೆಗೂ ಮುನ್ನ ವಿದ್ಯಾರ್ಥಿನಿಯರ ತಪಾಸಣೆ ವೇಳೆಯಲ್ಲಿ ಒಳ ಉಡುಪು ಕಳಚುವಂತೆ ಸೂಚಿಸಲಾಗಿತ್ತು ಎಂಬ ವರದಿ ಕೇಳಿದ ಬೆನ್ನಲ್ಲೇ ರಾಷ್ಟ್ರೀಯ ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಸ್ವತಂತ್ರ ತನಿಖೆ ನಡೆಸುವಂತೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ ಟಿಎ) ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.
ಇದು ಅತಿರೇಕದ ಹಾಗೂ ನಾಚಿಕೆಗೇಡಿನ ಸಂಗತಿಯಾಗಿದ್ದು, ವಿದ್ಯಾರ್ಥಿನಿಯರು ಮಾಡಿರುವ ಆರೋಪದ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕರು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ ಟಿಎ) ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ಕಾಲಮಿತಿಯೊಳಗೆ ತನಿಖೆ ನಡೆಸಿ, ಘಟನೆಗೆ ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಅವರು ಸೂಚನೆ ನೀಡಿದ್ದಾರೆ.
ಈ ಬಗ್ಗೆ ಕೇರಳ ಪೊಲೀಸ ಮಹಾನಿರ್ದೇಶಕರಿಗೂ ಆಯೋಗ ಪತ್ರ ಬರೆದಿದ್ದು, ನ್ಯಾಯಯುತವಾಗಿ ತನಿಖೆ ನಡೆಯಬೇಕು ಮತ್ತು ಒಂದು ವೇಳೆ ಆರೋಪ ಸತ್ಯವೆಂದು ಕಂಡುಬಂದಲ್ಲಿ ಸಂಬಂಧಿಸಿದ ಕಾನೂನಿನಡಿ ಎಫ್ ಐಆರ್ ದಾಖಲಿಸಬೇಕು. ಮೂರು ದಿನಗಳೊಳಗೆ ಕ್ರಮ ಕೈಗೊಳ್ಳಬೇಕು ಎಂದು ಎನ್ ಸಿ ಡಬ್ಲ್ಯೂ ಹೇಳಿದೆ.