ಹೊಸದಿಗಂತ ಶಿವಮೊಗ್ಗ :
ಕೊಲ್ಲೂರು ಮೂಕಾಂಬಿಕ ದೇವಸ್ಥಾನವನ್ನು ಪ್ರವಾಸೋದ್ಯಮ ಸಚಿವಾಲಯದ ತೀರ್ಥಯಾತ್ರೆಯ ಮೂಲಸೌಕರ್ಯ ಅಭಿವೃದ್ಧಿಗಾಗಿ ಪ್ರಸಾದ್ ಯೋಜನೆಯಡಿ ಅಭಿವೃದ್ಧಿ ಪಡಿಸಲು ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ನವದೆಹಲಿಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಭೇಟಿಯಾಗಿ ಮನವಿ ಸಲ್ಲಿಸಿದರು.
ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕೊಲ್ಲೂರು ಮೂಕಾಂಬಿಕಾ ದೇವಾಲಯ ದಕ್ಷಿಣ ಭಾರತದ ಅಧ್ಯಾತ್ಮಿಕ ಕ್ಷೇತ್ರದ ಮೂಲಾಧಾರವಾಗಿದೆ. ಧಾರ್ಮಿಕ ಮಹತ್ವದ ಜೊತೆಗೆ ಸುತ್ತಮುತ್ತಲಿನ ಪ್ರದೇಶ ನದಿಗಳು, ಕಡಲ ತೀರಗಳು, ಗಿರಿಧಾಮಗಳು, ಹಿನ್ನೀರು ಮತ್ತು ಮುಂಬರುವ ವಾಯುನೆಲೆಗಳ ಗಮನಾರ್ಹ ಮಿಶ್ರಣವನ್ನು ನೀಡುವುದರ ಜೊತೆಗೆ ಇವೆಲ್ಲವೂ 50 ಕಿಲೋಮೀಟರ್ ವ್ಯಾಪ್ತಿಯಲ್ಲಿವೆ. ಭೌಗೋಳಿಕತೆ ಮತ್ತು ಅಧ್ಯಾತ್ಮಿಕತೆಯ ಸಮಗ್ರ ದೃಷ್ಟಿಯಿಂದ ಪ್ರವಾಸೋದ್ಯಮದ ಅಭಿವೃದ್ಧಿಗೆ ಉತ್ತಮ ಅವಕಾಶ ಇದೆ ಎಂದು ತಿಳಿಸಿದರು.
ಪ್ರವಾಸೋದ್ಯಮ ಸಚಿವರಿಗೆ ಈ ಕ್ಷೇತ್ರದ ಬಗ್ಗೆ ಮನವರಿಕೆ ಮಾಡುವುದರ ಮೂಲಕ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು.