ಹುಬ್ಬಳ್ಳಿಯಲ್ಲಿ ಬೃಹತ್ ರೋಡ್ ಶೋ ನಡೆಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಹೊಸದಿಗಂತ ವರದಿ,ಹುಬ್ಬಳ್ಳಿ:

ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಅವರ ಪರವಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬೃಹತ್ ರೋಡ್ ಶೋ ನಡೆಸಿ ಮತಯಾಚಿಸಿದರು. ಗುರುವಾರ ಇಲ್ಲಿಯ ವಿದ್ಯಾನಗರದ ಹರ್ಷ ಫಾಸ್ಟ್ ಫುಡ್ ಎದುರಿಗೆ ಪ್ರಚಾರ ರಥ ಏರಿದ ಅವರು, ಮಹೇಶ ಟೆಂಗಿನಕಾಯಿ ಅವರ ಕೈ ಮೇಲೆತ್ತಿ ಪ್ರಚಾರಕ್ಕೆ ಚಾಲನೆ ನೀಡಿದರು.
ನೂರಾರು ಕಾರ್ಯಕರ್ತರು ಪ್ರಧಾನಿ ಮೋದಿಗೆ, ಬಿಜೆಪಿಗೆ, ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಜಯವಾಗಲಿ ಎಂಬ ಘೋಷಣೆ ಕೂಗಿದರು. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಕೊರಳಿಗೆ ಮಹಾನಗರ ಪಾಲಿಕೆ ಸದಸ್ಯೆಯರು ಪಕ್ಷದ ಶಾಲೂ ಹಾಕಿ ಅದ್ದೂರಿಯಾಗಿ ಸ್ವಾಗತಿಸಿದರು. ಅಲ್ಲಿಂದ ಆರಂಭವಾದ ಮೆರವಣಿಗೆ ತೋಳನಕೆರೆವರೆಗೂ ನಡೆಯಿತು. ಮಾರ್ಗದುದ್ದಕ್ಕೂ ಕಾರ್ಯಕರ್ತರು ಪುಷ್ಪವೃಷ್ಟಿ ಗೈದರು.
ಜಗ್ಗಲಗಿ ಹಾಗೂ ವಾದ್ಯ ಮೇಳಗಳು ಕಾರ್ಯಕರ್ತ ಪ್ರೋತ್ಸಾಹ ನೀಡಿದವು. ಸಚಿವೆ ಸ್ಮೃತಿ ಇರಾನಿ ಅವರು, ರಸ್ತೆಯ ಇಕ್ಕಲಲ್ಲಿ ನಿಂತಿದ್ದ ಸಾರ್ವಜನಿಕರು, ಯುವಕ ಹಾಗೂ ಯುವತಿಯರಿಗೆ ಕೈ ಎತ್ತಿ ನಮಸ್ಕಾರ ಮಾಡಿದರು. ಮಹಿಳಾ ಕಾರ್ಯಕರ್ತರು ನೃತ್ಯ ಮಾಡುವ ಮೂಲಕ ಮೆರವಣಿಗೆಯಲ್ಲಿ ಭಾಗವಹಿಸಿದ್ದು, ಇನ್ನೂ ವಿಶೇಷವಾಗಿತ್ತು.
ಶಿರೂರ ಪಾರ್ಕ್ ವೃತ್ತದಲ್ಲಿ ಕಾರ್ಯಕರ್ತರ ಉದ್ದೇಶಿಸಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತನಾಡಿ, ಇಷ್ಟು ವರ್ಷ ಎಲ್ಲ ಸಾಂವಿಧಾನಿ ಹುದ್ದೆ ಅನುಭವಿಸಿದ ಜಗದೀಶ ಶೆಟ್ಟರ ಇಂದು ನಮ್ಮ ವೈರಿಗಳ ಮನೆಗೆ ಹೋಗಿದ್ದಾರೆ. ಕಾರ್ಯಕರ್ತರಿಗಷ್ಟೇ ಅಲ್ಲದೆ ಪ್ರಧಾನಿ ಮೋದಿ ಹಾಗೂ ನಮ್ಮ ಬೆನ್ನಿಗೆ ಚೂರಿ ಹಾಕಿದ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಎಂದು ಹೇಳಿದರು.
ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಹಾಗೂ ತತ್ವ-ಸಿದ್ಧಾಂತ ಮಾಡಿದ ಅಪಮಾನ. ಈ ಚುನಾವಣೆ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರ ಹಾಗೂ ಪಕ್ಷ ಸಂಘಟನೆಯ ತಾಕತ್ತು ಪ್ರದರ್ಶಿಸುವ ಚುನಾವಣೆ. ನಮಗೆ ದ್ರೋಹ ಮಾಡಿದವರು ಗೆಲ್ಲಬೇಕಾ? ಜನರಿಗೆ ಮೋಸ ಮಾಡಿದವರು ಗೆಲ್ಲಬೇಕಾ? ಎಂದು ಅವರು ಪ್ರಶ್ನಿಸಿದಾಗ, ನೆರೆದಿದ್ದ ಕಾರ್ಯಕರ್ತರು ಇಲ್ಲ ಎಂದು ಕೂಗಿದರು.
ದೇಶವೇ ಮೊದಲು, ರಾಮ ನಮ್ಮ ಆರಾಧ್ಯ ದೈವ ಎಂದು ನಾವು ಪಾಲಿಸುತ್ತೇವೆ. ಆದರೆ, ರಾಮಮಂದಿರವನ್ನು ನಿರ್ಮಿಸದ, ರಾಮ ಅಸ್ತಿತ್ವ ಪ್ರಶ್ನಿಸುವವರ ಜೊತೆ ಅವರು ಹೋಗಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕಾಗಿ ಬಲಿದಾನ ಮಾಡಿದವರ ಮೇಲೆ ಪ್ರಮಾಣ ಮಾಡಿ, ನಿಮ್ಮ ಪರಿವಾರದೊಂದಿಗೆ ಮತಗಟ್ಟೆಗೆ ಹೋಗಿ, ಕಮಲದ ಗುರುತಿಗೆ ಮತ ಹಾಕಿ ಎಂದು ಮನವಿ ಮಾಡಿ ವಿಮಾನ ನಿಲ್ದಾನಕ್ಕೆ ತೆರಳಿದರು. ನಂತರ ವಿಆರ್‌ಎಲ್‌ನ ಮಾಲೀಕರಾದ ಆನಂದ ಸಂಕೇಶ್ವರ ಹಾಗೂ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ರೋಡ್ ಶೋ ಮುಂದುವರಿಯಿತು.
ಮಹಾನಗರ ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ರೂಪಾ ಶೆಟ್ಟಿ, ಮೀನಾಕ್ಷಿ ವಂಟಮೂರಿ, ರವಿ ನಾಯಕ ಸೇರಿದಂತೆ ಅನೇಕರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!