ಹಾಲಕ್ಕಿ ಮಹಿಳೆಯರ ಸಾಂಪ್ರದಾಯಿಕ ಉಡುಗೆಗೆ ಮನಸೋತ ಕೇಂದ್ರ ಸಚಿವ

ಹೊಸದಿಗಂತ ವರದಿ ಅಂಕೋಲಾ:

ಸಾಗರ ಪರಿಕ್ರಮ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಬೆಳಂಬಾರ ಕಡಲ ತೀರಕ್ಕೆ ಭೇಟಿ ನೀಡಿದ ಕೇಂದ್ರ ಮೀನುಗಾರಿಕಾ ಸಚಿವ ಪುರುಷೋತ್ತಮ ರೂಪಾಲಾ ದಂಪತಿ ಈ ಭಾಗದ ಜನ ಸಂಸ್ಕೃತಿ, ಪ್ರಾಕೃತಿಕ ಸೌಂದರ್ಯ ಕಂಡು ಮನಸೋತರು. ಬೆಳಂಬಾರದ ಹಾಲಕ್ಕಿ ಮಹಿಳೆಯರ ಸಾಂಪ್ರದಾಯಿಕ ಉಡುಗೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ರೂಪಾಲಾ ಇದು ಎಷ್ಟು ಸುಂದರವಾಗಿದೆ ದಯವಿಟ್ಟು ನಮ್ಮೊಂದಿಗೆ ನಿಲ್ಲುತ್ತೀರಾ ಎಂದು ಕೇಳಿ ಅವರೊಂದಿಗೆ ಪೋಟೋಗೆ ಜೊತೆಯಾದರು.

ಕಾರವಾರ ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಅವರು ಜಿಲ್ಲೆಯ ಹಾಲಕ್ಕಿ ಜನಾಂಗದ ಕುರಿತು ಸಚಿವರಿಗೆ ಮಾಹಿತಿ ನೀಡಿ ಅಂಕೋಲಾದ ಇಬ್ಬರು ಹಾಲಕ್ಕಿ ಸಮಾಜದ ಮಹಿಳೆಯರು ಪದ್ಮಶ್ರೀ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದಾರೆ ಎಂದರು.

ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ ಅವರನ್ನು ಸಚಿವರಿಗೆ ಪರಿಚಯಿಸಿದ ಶಾಸಕಿ ರೂಪಾಲಿ ನಾಯ್ಕ ಹಾಲಕ್ಕಿ ಸಮಾಜ ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ಹಿಂದುಳಿದ ಬುಡಕಟ್ಟು ಸಮುದಾಯವಾಗಿದ್ದು ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಈ ಜನರ ಬಹುಕಾಲದ ಬೇಡಿಕೆಯಾಗಿದೆ ಈ ದಿಶೆಯಲ್ಲಿ ಸರ್ಕಾರದ ಪ್ರಯತ್ನ ಮುಂದುವರಿದಿದೆ ಎಂದು ತಿಳಿಸಿದರು.

ಬೆಳಂಬಾರ ಕಡಲ ತೀರದಲ್ಲಿ ನಿಂತ ದೋಣಿಗಳನ್ನು ಕಂಡ ಸಚಿವ ರೂಪಾಲಾ ಇದು ಪಾತಿ ದೋಣಿ ಅಲ್ಲವೇ ಎಂದು ಮೀನುಗಾರರಿಗೆ ವಿಚಾರಿಸಿದರು ನೀವು ಮೀನುಗಾರಿಕೆಗೆ ಯಾಕೆ ಹೋಗಿಲ್ಲ ಯಾವ ಸಮಯದಲ್ಲಿ ಹೋಗುತ್ತೀರಿ ಎಂದು ಆತ್ಮೀಯವಾಗಿ ಕೇಳಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರೆ ಇಲಾಖೆಯ ಗಮನಕ್ಕೆ ತರುವಂತೆ ತಿಳಿಸಿದರು.

ಕೇಂದ್ರ ಮೀನುಗಾರಿಕಾ ರಾಜ್ಯ ಸಚಿವ ಡಾ.ಎಲ್. ಮುರುಗನ್, ರಾಜ್ಯ ಮೀನುಗಾರಿಕೆ ಸಚಿವ ಎಸ್. ಅಂಗಾರ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!