ಸ್ವಾತಂತ್ರ್ಯಕ್ಕಾಗಿ ಜೀವಕೊಟ್ಟ ಕರ್ನಾಟಕದ ಮಹೋನ್ನತ ಕ್ರಾಂತಿವೀರರಿವರು..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ( ಸ್ವಾತಂತ್ರೋತ್ಸವದ ಅಮೃತಮಹೋತ್ಸವ ವಿಶೇಷ)

ವೆಂಕಟಪ್ಪ ನಾಯಕ (ಯಾದಗಿರಿ)
ವೆಂಕಟಪ್ಪ ನಾಯಕ ಕರ್ನಾಟಕದ ಯಾದಗಿರಿ ಜಿಲ್ಲೆಯ ಸುರಪುರ ನಿವಾಸಿ. ರಾಜ್ಯದಲ್ಲಿ ಬ್ರಿಟೀಷರ ಆಳ್ವಿಕೆಯನ್ನು ಉಗ್ರವಾಗಿ ಖಂಡಿಸಿ ಸಿಡಿದೆದ್ದರು. ಬ್ರಿಟೀಷರನ್ನು ವಿರೋಧಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಯಿತು. ಆ ಬಳಿಕ ಮದ್ರಾಸ್ ಪ್ರೆಸಿಡೆನ್ಸಿಯ ಚಿಂಗಲೆಪೇಟ್ ಸೆರೆಮನೆಗೆ ಕರೆದೊಯ್ಯಲಾಯಿತು. ವೆಂಕಟಪ್ಪ ನಾಯಕ 11 ಮೇ 1858 ರಂದು ಅಂಬತ್ತೂರಿನಲ್ಲಿ ಗುಂಡು ಹಾರಿಸಿಕೊಂಡು ಹುತಾತ್ಮರಾದರು.

ವಿಷ್ಣು ಹಿರೇಕೊಪ್ಪ (ವಿಷ್ಣು ಕುಲಕರ್ಣಿ) (ಗದಗ)
ವಿಷ್ಣು ಹಿರೇಕೊಪ್ಪ ನರಗುಂದ ಸಂಸ್ಥಾನದ ಹಿರೇಕೊಪ್ಪ ನಿವಾಸಿ (ಈಗ ಗದಗ ಜಿಲ್ಲೆ). ಅವರು ನರಗುಂದ ದಂಗೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು ಮತ್ತು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಉಚ್ಛ್ರಾಯ ಹಂತ ತಲುಪಿದ್ದ 1858ರ ಮೇ 29ರ ರಾತ್ರಿ ಸುರೇಬಾನ್‌ನಲ್ಲಿ ಬ್ರಿಟಿಷ್ ಅಧಿಕಾರಿ ಮ್ಯಾನ್ಸನ್ ಎಂಬಾತನ ಶಿರಚ್ಛೇದ ಮಾಡಿದರು. ವಿಷ್ಣು ಹಿರೇಕೊಪ್ಪರನ್ನು ಬ್ರಿಟೀಷರು ಸೆರೆಹಿಡಿದು 1860ರಲ್ಲಿ ನರಗುಂದದಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಿದರು.

ವಿರೂಪಾಕ್ಷಪ್ಪ( ದಾವಣಗೆರೆ)
ವಿರೂಪಾಕ್ಷಪ್ಪ ಕರ್ನಾಟಕದ ದಾವಣಗೆರೆ ನಿವಾಸಿ. ಅವರು 1942 ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದರು. ಅವರು ತಾಲೂಕು ಕಚೇರಿಯಲ್ಲಿ ಚಳವಳಿ ಅಂಗವಾಗಿ ಪಿಕೆಟಿಂಗ್‌ ನಡೆಸಿದರು. ಮಿಲಿಟರಿ ವಾಹನಗಳು ಮತ್ತು ರೈಲುಗಳ ಮೇಲೆ ದಾಳಿ ನಡೆಸಿ ಅವುಗಳನ್ನು ತಡೆದು ನಿಲ್ಲಿಸಿದರು. 1942 ರ ಆಗಸ್ಟ್ 17 ರಂದು ದಾವಣಗೆರೆಯಲ್ಲಿ ಪಿಕೆಟರ್‌ಗಳ ಮೇಲೆ ಪೊಲೀಸರು ಗುಂಡಿನ ಮಳೆಗರೆದರು. ಆ ವೇಳೆ ವಿರೂಪಾಕ್ಷಪ್ಪ ಪೋಲೀಸರ ಗುಂಡಿಗೆ ಬಲಿಯಾದರು. ಆಗ ಅವರಿಗೆ ಕೇವಲ 25 ವರ್ಷಗಳಾಗಿತ್ತು.

ವೆಂಕಟಪ್ಪ ಗುಂಟಣ್ಣನವರ್( ರಾಮದುರ್ಗ)
ವೆಂಕಟಪ್ಪ ಗುಂಟಣ್ಣನವರ್ ಅವರು 1881 ರಲ್ಲಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ್‌ನಲ್ಲಿ ಜನಿಸಿದರು. ರಾಮದುರ್ಗ ದಲ್ಲಿ ಪ್ರಜಾ ಸಂಘದ (1938-39) ಸಂಘಟನೆ ನೇತೃತ್ವದಲ್ಲಿ ಬ್ರಿಟೀಷ್‌ ಸರ್ಕಾರದ ವಿರುದ್ಧ ನಡೆದ ಚಳವಳಿಯಲ್ಲಿ ಅವರು ಭಾಗವಹಿಸಿದರು. ಪ್ರಜಾ ಸಂಘವು 7 ಏಪ್ರಿಲ್ 1939 ರಂದು ತನ್ನ ನಾಯಕ ಬಿ.ಎನ್. ಮುನವಳ್ಳಿ ಮತ್ತು ಇತರರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಬೃಹತ್ ಮೆರವಣಿಗೆಯನ್ನು ನಡೆಸಿತು. ರಾಮದುರ್ಗ ಜೈಲಿನ ಬಳಿ ಪ್ರತಿಭಟನಾಕಾರರ ಮೇಲೆ ಬ್ರಿಟೀಷ್ ಪೊಲೀಸರು ಗುಂಡು ಹಾರಿಸಿದಾಗ ಗುಂಟಣ್ಣನವರ್ ಇತರ 3 ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಕೊಲ್ಲಲ್ಪಟ್ಟರು.

ವೊಬುಲ್ ದಾಸ್ (ಗದಗ, ಕರ್ನಾಟಕ)
ವೊಬುಲ್ ದಾಸ್ ಗದಗ, ಜಿಲ್ಲೆಯ ಬೇಗೆವಾಡಿ ನಿವಾಸಿ. 1857-58ರಲ್ಲಿ ಭೀಮ್ ರಾವ್ ಮತ್ತು ಕಾಂಚನ್ ಗೌಡರ ನೇತೃತ್ವದಲ್ಲಿ ಬ್ರಿಟಿಷ್  ಆಡಳಿತ ವಿರೋಧಿ ಹೋರಾಟದಲ್ಲಿ ಭಾಗವಹಿಸಿದರು. ಕೊಪ್ಪಲದುರ್ಗದಲ್ಲಿ ಸಂಭವಿಸಿದ ಯುದ್ಧದಲ್ಲಿ ಬ್ರಿಟಿಷರಿಂದ ಸೆರೆಹಿಡಿಯಲ್ಪಟ್ಟ ದಾಸ್‌ ರನ್ನು ಅನ್ನು ಫಿರಂಗಿಯಿಂದ ಸ್ಫೋಟಿಸಿ ಕೊಂದು ಹಾಕಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!