ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಹಬ್ಬಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಉತ್ತರಪ್ರದೇಶ ಜನತೆಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ನಿನ್ನೆ ಬುಲಂದ್‌ಶಹರ್‌ನಲ್ಲಿ 632 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಯೋಗಿ, ದೀಪಾವಳಿ ಉಡುಗೊರೆಯಾಗಿ ಉಚಿತ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಘೋಷಿಸಿದರು. ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಹೊಂದಿರುವವರಿಗೆ ದೀಪಾವಳಿ ಹಬ್ಬಕ್ಕೆ ಉಚಿತವಾಗಿ ಸಿಲಿಂಡರ್ ನೀಡುವುದಾಗಿ ತಿಳಿಸಿದರು. ಸಿಎಂ ಘೋಷಣೆಯಿಂದ ರಾಜ್ಯಾದ್ಯಂತ 1.75 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದೆ.
ಈ ವೇಳೆ ಮಾತನಾಡಿದ ಸಿಎಂ ಯೋಗಿ, 2014ರಲ್ಲಿ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಪಡೆಯುವುದೇ ಸವಾಲಾಗಿತ್ತು. ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದಿರುವ ಎಲ್ಲರಿಗೂ ಸಿಲಿಂಡರ್ ದರದಲ್ಲಿ 300ರೂ. ಕೇಂದ್ರ ಸರಕಾರ ಇಳಿಕೆ ಮಾಡಿತ್ತು. ಇದೀಗ ರಾಜ್ಯದಲ್ಲಿ ಈ ಯೋಜನೆಯ ಫಲಾನುಭವಿಗಳಿಗೆ ದೀಪಾವಳಿ ಉಡುಗೊರೆಯಾಗಿ ಉಚಿತ ಗ್ಯಾಸ್ ಸಿಲಿಂಡರ್ ನೀಡಲಾಗುವುದು ಎಂದರು.
ಬಿಜೆಪಿಯ ಪ್ರತಿಯೊಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಈ ಸಂದರ್ಭದಲ್ಲಿ ಜನತೆಗೆ ಯೋಗಿ ಆದಿತ್ಯಾನಾಥ್ ಕರೆ ನೀಡಿದರು.