Thursday, December 8, 2022

Latest Posts

ಉಪಾಧ್ಯಾಯರ ಜೀವನ, ವ್ಯಕ್ತಿತ್ವ, ವಿಚಾರಗಳು ಯಾವತ್ತೂ ಸ್ಮರಣೀಯ: ಬಿ.ಎಲ್. ಸಂತೋಷ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರು: ಪಂಡಿತ್ ದೀನದಯಾಳ್ ಉಪಾಧ್ಯಾಯರ ಜೀವನ, ವ್ಯಕ್ತಿತ್ವ ಮತ್ತು ವಿಚಾರಗಳು ಯಾವತ್ತೂ ಸ್ಮರಣೀಯವಾದುವು. ಭಾರತದ ಮೂಲಭೂತ ಚಿಂತನೆಗನುಗುಣವಾಗಿ ರಾಜಕೀಯ ಕ್ಷೇತ್ರವನ್ನು ಅಭಿವೃದ್ಧಿಯ ಮಾರ್ಗದಲ್ಲಿ ಅಪಶ್ರುತಿ ಅಥವಾ ಹಳಿತಪ್ಪದಂತೆ ಕೊಂಡೊಯ್ಯುವ ವಿಚಾರ ಕೊಟ್ಟವರವರು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಂಗಳೂರು ಮಹಾನಗರದ ವತಿಯಿಂದ ಪಂಡಿತ್ ದೀನದಯಾಳ್ ಉಪಾಧ್ಯಾಯರ 106 ನೇ ಜಯಂತಿ ನಿಮಿತ್ತ ಭಾನುವಾರ ಜಯನಗರದ ಮಂಗಳ ಮಂಟಪದಲ್ಲಿ ಆಯೋಜಿಸಿದ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಬೌದ್ಧಿಕ್ ನೀಡಿ, ದೀನದಯಾಳರ ವಿಚಾರಗಳು ಹೇಳುವುದಕ್ಕೆ ತುಂಬಾ ಕಷ್ಟವಾಗಿದ್ದರೂ ಬಹಳ ಸುಲಭವಾಗಿ ಅರ್ಥವಾಗುವಂಥವು. ಈ ದೇಶದ ಮಣ್ಣಿನ ಸೊಗಡಿಗೆ, ಜನಜೀವನಕ್ಕೆ ತುಂಬಾ ಹತ್ತಿರವಾಗಿ ಬದುಕುತ್ತಿರುವವರಿಗೆ ದೀನದಯಾಳರ ವಿಚಾರ ಬಹಳ ಆಪ್ತವಾದವು ಎಂದರು.
ಮನುಷ್ಯ ಜೀವನದ ಅನೇಕ ಪ್ರಶ್ನೆಗಳಿಗೆ ತಂತ್ರಜ್ಞಾನ, ವಿಜ್ಞಾನ ಮತ್ತು ನಗರೀಕತೆ ಉತ್ತರವಾಗುವಾಗ, ಆ ಪ್ರಶ್ನೆಗಳಿಗೆ ತಂತ್ರಜ್ಞಾನ, ವಿಜ್ಞಾನ ಮತ್ತು ನಗರೀಕತೆ ಕಾರಣವಾಗುತ್ತದೆ ಎಂಬುದನ್ನು ನಾವು ಮರೆಯಬಾರದು. ಇವುಗಳು ಸಮಸ್ಯೆಗಳಿಗೆ ಪರಿಹಾರ ಕೊಡುತ್ತಿವೆ, ಅದೇ ಸಮಯಕ್ಕೆ ಮಾನವೀಯ ವೌಲ್ಯಗಳಿಂದ ನಮ್ಮನ್ನು ದೂರು ಕೊಂಡೊಯ್ಯುತ್ತಿದೆಯಾ ಎಂದು ಬಿ.ಎಲ್. ಸಂತೋಷ್ ಆತಂಕ ವ್ಯಕ್ತಪಡಿಸಿದರು.
ಆಧ್ಯಾತ್ಮಿಕತೆಗೆ ಹೊರತಾಗಿರುವ ವಿಜ್ಞಾನ ಶುಷ್ಕ ಎಂಬುದು ಇವತ್ತು ಅನೇಕರಿಗೆ ಅರ್ಥವಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಉದ್ಯೋಗ ಮತ್ತು ನಗರೀಕರಣದಿಂದಾಗ ಅನೇಕರನ್ನು ಬಡತನದಿಂದ ಹೊರಬಂದು ಮಧ್ಯಮವರ್ಗ ಪ್ರವೇಶ ಮಾಡುವಂತೆ ಮಾಡಿದೆ. ಜಾಗತೀಕರಣ ಮತ್ತು ಉದಾರವಾದದ ಹೆಸರಿನಲ್ಲಿ ಅದೇ ನಗರೀಕರಣ ನಮ್ಮನ್ನು ಪರಸ್ಪರ ಸಂಬಂಧಗಳಿಂದ ದೂರ ಮಾಡಿದೆ. ಆದರೆ, ಸಮ್ಯಕ್ ಶ್ರುತಿಗೆ ಒಳಪಟ್ಟು ಮನುಷ್ಯನ ಜೀವನಕ್ಕೆ ತಂತ್ರಜ್ಞಾನ, ವಿಜ್ಞಾನ ಮತ್ತು ನಗರೀಕರಣ ಬೇಕು ಎಂದು ಹೇಳಿದರು.
ಜಗತ್ತಿಗೆ ಒಳ್ಳೆಯದು ಮಾಡುತ್ತವೆ ಎನ್ನುವ ಅಮೆರಿಕ, ರಷ್ಯಘಿ, ಚೀನಾ ಮುಂತಾದ ಜಾಗತಿಕ ಶಕ್ತಿಗಳು ಇವತ್ತು ಕುಟಿಲತನಕ್ಕೂ ಇನ್ನೊಂದು ಹೆಸರಾಗುತ್ತಿವೆ. ನೈತಿಕ ಅಥವಾ ವಿಶ್ವಶಾಂತಿಯ ಮಾರ್ಗದಲ್ಲಿ ಈ ಜಾಗತಿಕ ಶಕ್ತಿಗಳು ನಡೆಯುತ್ತಿಲ್ಲ. ಅವು ತಮ್ಮ ಕುಟಿಲ ರಾಜನೀತಿಗಳಿಂದಾಗಿಯೇ ಜಗತ್ತನ್ನು ಧ್ವಂಸ ಮಾಡುತ್ತಿವೆ. ಆದರೆ, ಭಾರತ ಯಾವುದನ್ನೂ ಅಂತಿಮ ಎಂದು ಹೇಳಿಲ್ಲ, ಸಮನ್ವಯದ ದೃಷ್ಟಿ ಭಾರತೀಯರದ್ದು. ಇನ್ನೊಬ್ಬರನ್ನು ಹಾಳು ಮಾಡಬೇಕೆಂಬ ದೃಷ್ಟಿ ಯಾವತ್ತೂ ಭಾರತಕ್ಕಿರಲಿಲ್ಲ ಎಂದು ಪ್ರತಿಪಾದಿಸಿದರು.
ಇವತ್ತಿನ ಜಗತ್ತಿನಲ್ಲಿ ಎಲ್ಲಾ ಕಡೆ ಸಂಘರ್ಷವಿದ್ದರೂ ಭಾರತೀಯ ಚಿಂತನೆ ಇಂಥ ಸಂಘರ್ಷವನ್ನು ಬೆಂಬಲಿಸಲಿಲ್ಲ. ಗೆಲುವಿನಲ್ಲಿಯೂ ಶತ್ರುಗಳನ್ನು ಸೋಲಿಸಬೇಕು ಹೊರತು, ಶತ್ರುಗಳನ್ನು ಸಾಯಿಸಬೇಕು ಎಂದು ಹೇಳಿಲ್ಲ. ನಮ್ಮಲ್ಲಿ ಯುದ್ಧಕ್ಕೂ ನಿಯಮವಿತ್ತು. ಪರಸ್ಪರ ಸಂಘರ್ಷದಿಂದ ದೇಶ ಬೆಳೆಯಲು ಸಾಧ್ಯವಿಲ್ಲ. ಪರಸ್ಪರ ಪೂರಕವಾಗಿ ಪ್ರಕೃತಿಯಲ್ಲಿ ಅದು ಸಹಜವಾಗಿ ಮರುಹುಟ್ಟು ಪಡೆಯುವಷ್ಟನ್ನು ಮಾತ್ರ ಬಳಸಬೇಕು ಎಂಬುದನ್ನು ದೀನದಯಾಳರು ಏಕಾತ್ಮ ಮಾನವತಾ ವಾದದ ಮೂಲಕ ತಿಳಿಸಿದ್ದಾರೆ ಎಂದು ವಿವರಿಸಿದರು.
ಆರ್‌ಎಸ್‌ಎಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಚಾಲಕ್ ವಿ. ನಾಗರಾಜ್, ಬೆಂಗಳೂರು ಮಹಾನಗರ ಸಂಘಚಾಲಕ್ ಡಾ. ಎಂ.ಕೆ. ಶ್ರೀಧರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!