ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾ, ಮಾರಿಷಸ್ ಜೊತೆ ವ್ಯವಹರಿಸುವ ಭಾರತೀಯ ನಾಗರಿಕರಿಗೆ ಕೇಂದ್ರ ಸರ್ಕಾರ ಇನ್ನಷ್ಟು ಸೌಲಭ್ಯ ಒದಗಿಸಿದೆ. ಇದರ ಭಾಗವಾಗಿ ಯುಪಿಐ ಸೇವೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.
ಇನ್ನು ಎರಡೂ ದೇಶಗಳಲ್ಲಿ ಯುಪಿಐ ಜೊತೆಗೆ ರುಪೇ ಕಾರ್ಡ್ ಸೇವೆ ಪ್ರಾರಂಭವಾಗಲಿದ್ದು, ಭಾರತದಿಂದ ಶ್ರೀಲಂಕಾ ಮತ್ತು ಮಾರಿಷಸ್ ಗೆ ಪ್ರಯಾಣಿಸುವ ಭಾರತೀಯ ನಾಗರಿಕರಿಗೆ ಮತ್ತು ಈ ಎರಡು ದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರಿಗೆ ಡಿಜಿಟಲ್ ವಹಿವಾಟು ಇನ್ನಷ್ಟು ಸುಲಭವಾಗಲಿದೆ.
ಈ ಕಾರ್ಯಕ್ರಮವು ಇಂದು ಮಧ್ಯಾಹ್ನ 1 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದೆ. ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಜೊತೆ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನೌತ್ ಕೂಡ ಇರಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.