ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧದ ಮಧ್ಯೆ ಅಮೆರಿಕದ ರಕ್ಷಣಾ ಇಲಾಖೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.
ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ಅಮೆರಿಕ ಸೇನೆಯ ಮುಖ್ಯಸ್ಥ ಜನರಲ್ ರಾಂಡಿ ಜಾರ್ಜ್ ಅವರಿಗೆ ತಕ್ಷಣದಿಂದಲೇ ಹುದ್ದೆಯಿಂದ ನಿವೃತ್ತಿ ಪಡೆಯುವಂತೆ ಸೂಚಿಸಿರುವುದು ರಾಜಕೀಯ ಹಾಗೂ ಸೇನಾ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
2023ರಲ್ಲಿ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದ ರಾಂಡಿ ಜಾರ್ಜ್ ಅವರ ಅವಧಿ 2027ರವರೆಗೆ ಇರಬೇಕಾಗಿತ್ತು. ಆದರೆ ಯುದ್ಧದ ಸೂಕ್ಷ್ಮ ಸಂದರ್ಭದಲ್ಲಿ ಈ ಅಚಾನಕ್ ನಿರ್ಧಾರ ಕೈಗೊಳ್ಳಲಾಗಿದೆ. ಪೆಂಟಗನ್ ಮೂಲಗಳ ಪ್ರಕಾರ, ಆಡಳಿತದ ರಕ್ಷಣಾ ನೀತಿಗಳನ್ನು ವೇಗವಾಗಿ ಜಾರಿಗೆ ತರುವ ಉದ್ದೇಶದಿಂದ ಈ ನಾಯಕತ್ವ ಬದಲಾವಣೆ ನಡೆದಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:
ಜಾರ್ಜ್ ಅವರ ನಿರ್ಗಮನದ ಬಳಿಕ ಉಪ ಸೇನಾ ಮುಖ್ಯಸ್ಥ ಜನರಲ್ ಕ್ರಿಸ್ಟೋಫರ್ ಲಾನೆವ್ ಹಂಗಾಮಿ ಮುಖ್ಯಸ್ಥರಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಗ್ಸೆತ್ ಹಲವು ಹಿರಿಯ ಸೇನಾ ಅಧಿಕಾರಿಗಳಲ್ಲಿ ಬದಲಾವಣೆಗಳನ್ನು ಮಾಡುತ್ತಿರುವುದು ಗಮನಾರ್ಹವಾಗಿದೆ. ಈ ಹಿಂದೆ ನೌಕಾಪಡೆ ಮತ್ತು ವಾಯುಪಡೆಯ ಕೆಲವು ಪ್ರಮುಖ ಅಧಿಕಾರಿಗಳನ್ನೂ ಹುದ್ದೆಯಿಂದ ತೆರವುಗೊಳಿಸಲಾಗಿದೆ.
ಇರಾನ್ ವಿರುದ್ಧದ ಯುದ್ಧ ಮುಂದುವರಿದಿರುವ ಈ ನಿರ್ಣಾಯಕ ಹಂತದಲ್ಲಿ ಸೇನಾ ನಾಯಕತ್ವದಲ್ಲಿ ನಡೆದ ಈ ಬದಲಾವಣೆ ಅಮೆರಿಕದ ಮುಂದಿನ ಕಾರ್ಯತಂತ್ರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.



