ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಚುನಾವಣೆಗೆ ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿ ಮಿನ್ನೆಸೊಟಾದ ಗವರ್ನರ್ ಟಿಮ್ ವಾಲ್ಜ್ ಅವರ ಹೆಸರನ್ನು ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅಂತಿಮಗೊಳಿಸಿದ್ದಾರೆ.
ಪ್ರಗತಿಪರ ನೀತಿ ನಿರೂಪಕ ಎಂದೇ ಗುರುತಿಸಿಕೊಂಡಿರುವ ಟಿಮ್ ಅವರು ಮೃದುಭಾಷಿ. ಅಮೆರಿಕದ ಹೃದಯ ಭಾಗಕ್ಕೆ ಸೇರಿದ ಇವರ ಆಯ್ಕೆಯ ಮೂಲಕ ಗ್ರಾಮೀಣ ಹಾಗೂ ಬಿಳಿಯರ ಮತಗಳನ್ನು ಪಡೆಯುವ ಲೆಕ್ಕಾಚಾರ ಡೆಮಾಕ್ರೆಟಿಕ್ ಪಕ್ಷ ಹೊಂದಿದೆ ಎಂದೆನ್ನಲಾಗಿದೆ.
60 ವರ್ಷದ ವಾಲ್ಜ್ ಅವರು ಅಮೆರಿಕದ ರಾಷ್ಟ್ರೀಯ ಸೇನೆಯ ಮಾಜಿ ಯೋಧ, ಶಿಕ್ಷಕರೂ ಆಗಿದ್ದವರು. 2006ರಲ್ಲಿ ಅಮೆರಿಕದ ಹೌಸ್ ಆಫ್ ರೆಪ್ರಸೆಂಟಿಟೀವ್ಸ್‌ಗೆ ಆಯ್ಕೆಯಾದ ಇವರು ಅಲ್ಲಿ 12 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ಮಿನ್ನೆಸೊಟಾದ ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ.
ಜಮೈಕಾ ಹಾಗೂ ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಅಧ್ಯಕ್ಷ ಸ್ಥಾನದ ಸ್ಪರ್ಧಿಯಾಗಿದ್ದಾರೆ. ರಿಪಬ್ಲಿಕನ್ ಪಕ್ಷದಿಂದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪರ್ಧಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ಜೆ.ಡಿ. ವೇನ್ಸ್ ಸ್ಪರ್ಧಿಸಿದ್ದಾರೆ.