ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಶಮನಕ್ಕೆ ಅಮೆರಿಕ ಮುಂದಾಗಿದ್ದು, ಭಯೋತ್ಪಾದನೆಯ ವಿರುದ್ಧ ದೆಹಲಿಯೊಂದಿಗೆ ಸಹಕರಿಸುವ ತನ್ನ ಬದ್ಧತೆಯ ಬಗ್ಗೆ ಪುನರುಚ್ಚರಿಸಿದೆ. ಅಲ್ಲದೆ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ತನಿಖೆಗೆ ಸಹಕಾರ ನೀಡುವಂತೆ ಇಸ್ಲಾಮಾಬಾದ್ಗೆ ಒತ್ತಾಯಿಸಿದೆ.
ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಬುಧವಾರ ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಮತ್ತು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ.
ಜೈಶಂಕರ್ ಅವರೊಂದಿಗಿನ ತಮ್ಮ ಕರೆಯಲ್ಲಿ, ಪಹಲ್ಗಾಮ್‌ನಲ್ಲಿ ನಡೆದ ಭಯಾನಕ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು, ಹೆಚ್ಚಾಗಿ ಪ್ರವಾಸಿಗರು ಸಾವನ್ನಪ್ಪಿರುವ ಬಗ್ಗೆ ದುಃಖ ವ್ಯಕ್ತಪಡಿಸಿದರು.
ಭಯೋತ್ಪಾದನೆಯ ವಿರುದ್ಧ ಭಾರತದೊಂದಿಗೆ ಸಹಕರಿಸಲು ಅಮೆರಿಕದ ಬದ್ಧತೆಯನ್ನು ರುಬಿಯೊ ಪುನರುಚ್ಚರಿಸಿದರು. ದಕ್ಷಿಣ ಏಷ್ಯಾದಲ್ಲಿ ಉದ್ವಿಗ್ನತೆ ಕಡಿಮೆ ಮಾಡಲು ಮತ್ತು ಶಾಂತಿ ಮತ್ತು ಭದ್ರತೆ ಕಾಪಾಡಲು ಪಾಕಿಸ್ತಾನದೊಂದಿಗೆ ಕೆಲಸ ಮಾಡುವಂತೆ ಭಾರತಕ್ಕೆ ಅವರು ಉತ್ತೇಜಿಸಿದರು ಎಂದು ವಿದೇಶಾಂಗ ಇಲಾಖೆ ವಕ್ತಾರ ಟ್ಯಾಮಿ ಬ್ರೂಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.