ವಿಶ್ವಕಪ್‌ನಲ್ಲಿ LGBTQ ಶರ್ಟ್‌ ಧರಿಸಿದ್ದ ಅಮೆರಿಕ ಪತ್ರಕರ್ತ ಸಾವು: ಕತಾರ್‌ ಹತ್ಯೆ ನಡೆಸಿದೆ ಎಂದು ಸಹೋದರ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಎಲ್‌ಜಿಬಿಟಿಕ್ಯು ಸಮುದಾಯವನ್ನು ಬೆಂಬಲಿಸಿ ರೈನ್‌ಬೋ ಶರ್ಟ್ ಧರಿಸಿದ್ದಕ್ಕಾಗಿ ಕತಾರ್‌ನಲ್ಲಿ ಬಂಧಿತರಾಗಿದ್ದ ಯುಎಸ್ ಪತ್ರಕರ್ತ ಗ್ರಾಂಟ್ ವಾಲ್ ಅವರು ಫಿಫಾ ವಿಶ್ವಕಪ್ ವರದಿ ಮಾಡುವಾಗ ಸಾವನ್ನಪ್ಪಿದ್ದಾರೆ.
ಲುಸೈಲ್ ಐಕಾನಿಕ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಅರ್ಜೆಂಟೀನಾ ಮತ್ತು ನೆದರ್ಲೆಂಡ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯವನ್ನು ಕವರ್ ಮಾಡುವಾಗ 48 ವರ್ಷದ ಗ್ರಾಂಟ್ ಕುಸಿದುಬಿದ್ದರು.
ಮಾಜಿ ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್ ಪತ್ರಕರ್ತರೂ ಆಗಿರುವ ಗ್ರಾಂಟ್ ಸಾವಿನಲ್ಲಿ ಕತಾರ್ ಸರ್ಕಾರವು ಭಾಗಿಯಾಗಿದೆ ಎಂದು ಗ್ರಾಂಟ್ ಅವರ ಸಹೋದರ ಎರಿಕ್ ಆರೋಪಿಸಿದ್ದಾರೆ.
“ನನ್ನ ಹೆಸರು ಎರಿಕ್ ವಾಲ್. ನಾನು ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿ ವಾಸಿಸುತ್ತಿದ್ದೇನೆ. ನಾನು ಗ್ರಾಂಟ್ ವಾಲ್ ಅವರ ಸಹೋದರ. ನಾನೊಬ್ಬ ಸಲಿಂಗಕಾಮಿ” ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ. “ಅವರು ವಿಶ್ವಕಪ್‌ಗೆ ಮಳೆಬಿಲ್ಲು ಶರ್ಟ್(ಎಲ್‌ಜಿಬಿಟಿಕ್ಯು ಸಮುದಾಯವನ್ನು ಪ್ರತಿನಿಧಿಸುವ ವರ್ಣ) ಧರಿಸಲು ನಾನು ಕಾರಣ.  ಆ ಬಳಿಕ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಅವನು ನನಗೆ ಹೇಳಿದ್ದ. ನನ್ನ ಸಹೋದರ ಸತ್ತಿದ್ದಾನೆ ಎಂದು ನಾನು ನಂಬುವುದಿಲ್ಲ, ಅವನು ಕೊಲ್ಲಲ್ಪಟ್ಟಿದ್ದಾನೆ ಎಂದು ನಾನು ನಂಬುತ್ತೇನೆ. ಮತ್ತು ಸಹಾಯ ನೀಡುವಂತೆ ನಾನು ಎಲ್ಲರನ್ನೂ ಬೇಡಿಕೊಳ್ಳುತ್ತೇನೆ” ಎಂದು ಅವರು ಮನವಿ ಮಾಡಿದ್ದಾರೆ.
ವಿಶ್ವಕಪ್‌ ಪ್ರಾರಂಭದಲ್ಲಿ ಅಲ್ ರಯಾನ್‌ನಲ್ಲಿರುವ ಅಹ್ಮದ್ ಬಿನ್ ಅಲಿ ಸ್ಟೇಡಿಯಂನಲ್ಲಿ ವೇಲ್ಸ್ ವಿರುದ್ಧದ ಅಮೆರಿಕದ ಆರಂಭಿಕ ಪಂದ್ಯಕ್ಕೆ ತನಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು. ಮತ್ತು ತನ್ನ ರೇನ್‌ಬೋ ಶರ್ಟ್ ಅನ್ನು ತೆಗೆಯುವಂತೆ ಸೂಚಿಸಲಾಗಿತ್ತು. ಆ ಬಳಿಕ ತನ್ನನ್ನು ಬಂಧಿಸಲಾಯಿತು ಎಣದು ಗ್ರಾಂಟ್ ಹೇಳಿದ್ದರು. ಘಟನೆಯ ಬಗ್ಗೆ ಟ್ವೀಟ್ ಮಾಡಿದಾಗ ತನ್ನ ಫೋನ್ ಕಿತ್ತುಕೊಳ್ಳಲಾಯಿತು ಎಂದು ಅವರು ಆರೋಪಿಸಿದ್ದರು.
ಸ್ಥಳದಲ್ಲಿದ್ದ ಭದ್ರತಾ ಅಧಿಕಾರಿಯೊಬ್ಬರು ನಂತರ ಕ್ಷಮೆಯಾಚಿಸಲು ಅವರನ್ನು ಸಂಪರ್ಕಿಸಿದರು ಮತ್ತು ಅವರನ್ನು ಕ್ರೀಡಾಂಗಣಕ್ಕೆ ಅನುಮತಿಸಿದರು ಎಂದು ಅವರು ಹೇಳಿದರು. ಅವರು ಫಿಫಾ ಪ್ರತಿನಿಧಿಯಿಂದ ಕ್ಷಮೆಯನ್ನೂ ಸ್ವೀಕರಿಸಿದ್ದೇನೆ ಎಂದು ಅವರು ಹೇಳಿದರು.
“ನಾವು ಅವರ ಸಾವಿಗೆ ಕಾರಣ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ” ಎಂದು ಎರಿಕ್ ಹೇಳಿದರು. “ಅವರು ಕ್ರೀಡಾಂಗಣದಲ್ಲಿ ಕುಸಿದುಬಿದ್ದರು, ಸಿಪಿಆರ್ ನೀಡಲಾಯಿತು, ಉಬರ್ ಆಸ್ಪತ್ರೆಗೆ ಕರೆದೊಯ್ದರು ಮತ್ತು ಅಲ್ಲಿ ನಿಧನರಾದರು. ಕತಾರ್‌ ನಲ್ಲಿ ಸಲಿಂಗ್‌ ಕಾಮ ಸಂಬಂಧಿತ ವಿಚಾರಗಳಿಗೆ ಕಟ್ಟುನಿಟ್ಟಿನ ನಿಷೇಧವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!